ADVERTISEMENT

ಹೆತ್ತೂರು | ಮಳೆಗೆ ನಲುಗಿದ ಕಾಳುಮೆಣಸು: ದಿಕ್ಕೆಟ್ಟ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:00 IST
Last Updated 22 ಆಗಸ್ಟ್ 2025, 2:00 IST
ಹೆತ್ತೂರು ಹೋಬಳಿಯಲ್ಲಿ ಅತಿಯಾದ ಮಳೆ– ಗಾಳಿಗೆ ಕಾಳುಮೆಣಸು ಉದುರಿರುವುದು.
ಹೆತ್ತೂರು ಹೋಬಳಿಯಲ್ಲಿ ಅತಿಯಾದ ಮಳೆ– ಗಾಳಿಗೆ ಕಾಳುಮೆಣಸು ಉದುರಿರುವುದು.   

ಹೆತ್ತೂರು: ಸತತ ಮೂರು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಕಾಳುಮೆಣಸು, ಕಾಫಿ, ಅಡಿಕೆ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಮಳೆ, ಮೋಡ, ಬಿಸಿಲಿನ ವಾತಾವರಣದಿಂದಾಗಿ ಕೊಳೆ ರೋಗ, ಕಪ್ಪು ಎಲೆ ಚುಕ್ಕಿ ರೋಗ ಉಲ್ಬಣಿಸುತ್ತಿದ್ದು, ಕಾಳುಮೆಣಸು ಗಿಡಗಳು ರೋಗಕ್ಕೆ ಹಾಳಾಗುತ್ತಿವೆ.

ಮಲೆನಾಡು ಭಾಗವಾದ ಹೆತ್ತೂರು, ಯಸಳೂರು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಈಗಾಗಲೇ ಕಾಳುಮೆಣಸಿಗೆ ವ್ಯಾಪಕವಾಗಿ ಕೊಳೆರೋಗ ಕಾಣಿಸಿಕೊಂಡಿದೆ. 2 ಬಾರಿ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡಿದ್ದರೂ ರೋಗ ನಿಯಂತ್ರಣವಾಗಿಲ್ಲ. ತೇವಾಂಶದಿಂದ ಕಾಳುಮೆಣಸು ಬಳ್ಳಿಗಳು ಕೊಳೆತು ಉದುರಿ ಬೀಳುತ್ತಿವೆ.

ಅತಿ ಹೆಚ್ಚು ನೀರು ಬಳಕೆ, ಪ್ರಾಕೃತಿಕ ಅಸಮತೋಲನ, ಅಕಾಲಿಕ ಮಳೆ, ಬಿಸಿಲು, ಚಳಿಯ ವಾತಾವರಣ ರೋಗ ಉಲ್ಬಣಕ್ಕೆ ಕಾರಣ ಎಂದು ಬೆಳೆಗಾರರು ಹೇಳುತ್ತಿದ್ದಾರೆ. ರೈತರು ಬೇಸಾಯ ಕ್ರಮ ಬದಲಾಯಿಸಿಕೊಂಡಿದ್ದು, ನಿರೀಕ್ಷಿತ ಪ್ರತಿಫಲ ದೊರೆಯುತ್ತಿಲ್ಲ.

ADVERTISEMENT

‘4 ವರ್ಷಗಳ ಹಿಂದೆ ಹೋಬಳಿಯಲ್ಲಿ ಕಪ್ಪು ಎಲೆಚುಕ್ಕಿ, ಕೊಳೆ ರೋಗದ ಲಕ್ಷಣ ಕಾಣಿಸಿಕೊಂಡಿತ್ತು. ಐದು ವರ್ಷ ಕಳೆದರೂ ಇಂದಿಗೂ ರೋಗ ತಡೆಗಟ್ಟುವ ಉಪಕ್ರಮಗಳು ಅಥವಾ ಸಂಶೋಧನೆಗಳು ನಡೆಯಲಿಲ್ಲ. ಹಳೆಯ ಸಾಂಪ್ರದಾಯಿಕ ಪದ್ಧತಿ ಹೊರತುಪಡಿಸಿ ಹೊಸ ಬಗೆಯ ಸಂಶೋಧನೆ ನಡೆಯುತ್ತಿಲ್ಲ’ ಎಂದು ರೈತರು ದೂರುತ್ತಿದ್ದಾರೆ.

ಕಳೆದ ಬಾರಿ ಆಯ್ದ ರೋಗ ಬಾಧಿತ ಕಾಳುಮೆಣಸು ತೋಟಗಳಿಗೆ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿದ್ದರು. ಈವರೆಗೂ ರೋಗಕ್ಕೆ ಕಾರಣವಾದ ಅಂಶಗಳ ಕುರಿತು ಅಧಿಕೃತ ಮಾಹಿತಿ ಲಭಿಸಿಲ್ಲ. ರೋಗ ನಿಯಂತ್ರಣ ಕ್ರಮಗಳ ಕುರಿತು ಸೂಕ್ತ ಸಲಹೆ, ಪಾಲಿಸಬೇಕಾದ ವಿಧಾನ ದೊರೆತಿಲ್ಲ ಎಂಬ ದೂರು ರೈತರಿಂದ ಕೇಳಿಬಂದಿದೆ.

5 ವರ್ಷಗಳಿಂದ ಸತತವಾಗಿ ಬಿಡದೇ ಕಾಡುತ್ತಿರುವ ಕೊಳೆರೋಗ ಕಾಳುಮೆಣಸಿಗೂ ಹಬ್ಬುತ್ತಿದೆ. ಸ್ವತಃ ರೈತರೇ ಪ್ರಯೋಗ ಮಾಡಿದ ಹಳೆಯ ಸರಕಲು ತೋಟ, ಸಸಿ ತೋಟಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ನಿಯಂತ್ರಣಕ್ಕಾಗಿ ರೈತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದು, ಪ್ರಯೋಜನ ಸಿಗುತ್ತಿಲ್ಲ. ಕೊಳೆರೋಗ, ಹಿಂಗಾರ ಒಣಗು, ಹಸಿರುಕಾಯಿ ಉದುರುವ ರೋಗಬಾಧೆಗೆ ಸಿಕ್ಕಿರುವ ಕಾಳುಮೆಣಸು ಸಂಪೂರ್ಣ ನಾಶದ ಹಾದಿ ಹಿಡಿದಿರುವುದು ರೈತರನ್ನು ಕಂಗೆಡಿಸಿದೆ.

ದೋಟಿ ಲಭ್ಯವಿರುವ ಕಾರಣ ಔಷಧ ಸಿಂಪಡಣೆ ಸುಲಭವಾಗಿದೆ. ಮರ ಹತ್ತುವವರ ಸಹಾಯ ಇಲ್ಲದೆಯೂ ಕಾಳುಮೆಣಸು ಗಿಡಗಳಿಗೆ ಔಷಧ ಸಿಂಪಡಿಸುವ ತಯಾರಿಯನ್ನು ರೈತರು ಮಾಡಿಕೊಂಡಿದ್ದಾರೆ. ಶೇ 50ರಷ್ಟು ಕಾಳುಮೆಣಸು ಕೊಳೆರೋಗ, ಕಪ್ಪು ಎಲೆಚುಕ್ಕಿಗೆ ಸಿಲುಕಿದೆ. ಬೋರ್ಡೋ ಮಿಶ್ರಣ ಔಷಧಕ್ಕೆ ಮೈಲುತುತ್ತ, ರಾಳ (ಅಂಟು) ಸುಣ್ಣ ಬಳಸಲಾಗುತ್ತದೆ.

ಎಕರೆ ಅಡಿಕೆ ತೋಟದ ಔಷಧ ಸಿಂಪಡಣೆಗೆ ಕುಶಲಕಾರ್ಮಿಕರ ವೇತನ, ಔಷಧ, ಸಾಮಗ್ರಿ ಸೇರಿ ಅಂದಾಜು ₹ 15ಸಾವಿರ ವೆಚ್ಚ ತಗಲುತ್ತದೆ. ಈ ವರ್ಷದ ಮಳೆ ಆರ್ಭಟದ ಪರಿಣಾಮ ಕೊಳೆರೋಗ ನಿಯಂತ್ರಣಕ್ಕೆ 4–5 ಬಾರಿ ಔಷಧಿ ಸಿಂಪರಣೆ ಅನಿವಾರ್ಯವಾಗಿದೆ ಎನ್ನುತ್ತಾರೆ ಬೆಳೆಗಾರರು.

ಕಪ್ಪು ಎಲೆಚುಕ್ಕಿ ಕೊಳೆ ರೋಗ ತಗುಲಿದ ಕಾಳುಮೆಣಸು ಗಿಡ ಸಂಪೂರ್ಣ ಕರಗಿರುವುದು.
ರೈತರಿಗೆ ರೋಗ ನಿಯಂತ್ರಿಸುವ ಕುರಿತು ಮಾಹಿತಿಯನ್ನು ತೋಟಗಾರಿಕಾ ಇಲಾಖೆಯ ಆಧಿಕಾರಿಗಳು ಕೊಡಲೇ ಬೆಳೆಗಾರರಿಗೆ ನೀಡಬೇಕಾಗಿದೆ. ಅಳಿದುಳಿರುವ ಬೆಳೆ ಉಳಿಸಿಕೊಳಲು ಸಹಾಯವಾಗುತ್ತದೆ.
ಎಚ್.ಇ. ನಾಗಭೂಷಣ ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ವಿಪರೀತ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು ಕಾಣುಮೆಣಸಿಗೆ ರೋಗ ಬಾಧೆ ಹೆಚ್ಚಾಗುತ್ತಿದೆ. ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಿದರೂ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಸರ್ಕಾರ ಪರಿಹಾರ ಘೋಷಿಸಬೇಕು.
ಎಚ್.ಜಿ ಮೋಹನ್ ಕುಮಾರ್ ಕೃಷಿಕ ಸಮಾಜದ ತಾಲ್ಲೂಕು ಘಟಕದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.