ADVERTISEMENT

ಹಾಸನ: ಪೊಲೀಸ್‌ ಬಲೆಗೆ ‘ಹನಿಟ್ರ್ಯಾಪ್‌’ ತಂಡ

ಮಹಿಳೆ ಸೇರಿ ಐವರ ಬಂಧನ, ಕಾರು, ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 16:04 IST
Last Updated 2 ಜನವರಿ 2019, 16:04 IST
ಹಾಸನ ಜಿಲ್ಲಾ ಪೊಲೀಸರು ಬಂಧಿಸಿರುವ ಆರೋಪಿಗಳು.
ಹಾಸನ ಜಿಲ್ಲಾ ಪೊಲೀಸರು ಬಂಧಿಸಿರುವ ಆರೋಪಿಗಳು.   

ಹಾಸನ: ಫೇಸ್‌ಬುಕ್‌ಮೂಲಕ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ ಜಾಲದಲ್ಲಿ ಸಿಲುಕಿಸಿ, ಹಣ ಸುಲಿಗೆ ಮಾಡಿದ್ದ ಮಹಿಳೆ ಸೇರಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಚಿಕ್ಕಲಸಂದ್ರದ ಜಿ.ಎಸ್ ಪವನ ಯಾದವ (25), ಅರ್ಪಿತಾ (22), ದಾಸರಹಳ್ಳಿಯ ಬಿ.ಆರ್.ಕಿರಣ (23), ಆನೆಕರೆಯ ದೊರೆ (19) ಹಾಗೂ ಪೀಣ್ಯ 2ನೇ ಹಂತದ ನಿವಾಸಿ ಹೇಮೇಶ (20)ನನ್ನು ಬಂಧಿಸಿ, ₹ 20 ಸಾವಿರ ನಗದು, ವಾಚ್‌, ಬೆಳ್ಳಿ ಸರ, ಬೈಕ್ ಹಾಗೂ ಎರಡು ಕಾರು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಪೊಲೀಸ್‌ ತಂಡಕ್ಕೆ ₹ 10 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ.

ಬಂಧಿತ ಯುವಕರು ವೃತ್ತಿಯಲ್ಲಿ ಕಾರು ಚಾಲಕರಾದರು.ಅರ್ಪಿತಾ‘ಪಡ್ಡೆಹುಲಿ’, ‘ನಟಸಾರ್ವಭೌಮ’ ಸೇರಿದಂತೆ ಇತರೆ ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ನಟಿಸಿದ್ದಾರೆ.

ADVERTISEMENT

‘ಅರ್ಪಿತಾಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಯುವಕರ ಜೊತೆ ಸಂವಹನ ನಡೆಸಿ, ಅವರನ್ನು ಭೇಟಿ ಮಾಡುವ ನೆಪದಲ್ಲಿ ಕರೆಸಿಕೊಂಡು ನಗದು, ಚಿನ್ನಾಭರಣ ದೋಚಲಾಗುತ್ತಿತ್ತು. ಡಿ. 22ರಂದು ಹಾಸನ ಬಟ್ಟೆ ವ್ಯಾಪಾರಿ ದಿಲೀಪ್ ಎಂಬುವರು ಅರಸೀಕೆರೆಯ ಜೇನುಕಲ್ ಬೆಟ್ಟಕ್ಕೆ ಬೈಕ್‌ನಲ್ಲಿ ಹೋಗುವಾಗ ಬಾಗೇಶ್ವರದ ಬಳಿ ಬೈಕ್‌ ಅಡ್ಡ ಹಾಕಿ ಡ್ರಾಪ್ ನೀಡುವಂತೆ ಅರ್ಪಿತಾಕೇಳಿದ್ದಾರೆ. ಆಕೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಂತೆ ಕಾರಿನಲ್ಲಿ ಬಂದ ಪವನ, ಕಿರಣ, ದೊರೆ ಹಾಗೂ ಹೇಮೇಶ್ ಬೈಕ್ ಅಡ್ಡ ಹಾಕಿ ದಿಲೀಪ್ ಮೇಲೆ ಹಲ್ಲೆ ನಡೆಸಿ, ₹ 2 ಸಾವಿರ ನಗದು, ಮೊಬೈಲ್ ಕಸಿದಕೊಂಡು ಬೆಳ್ಳೂರು ಕಡೆಗೆ ಕಾರು ಚಾಲನೆ ಮಾಡಿಕೊಂಡು ಹೋಗಿದ್ದರು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್‌.ಪ್ರಕಾಶ್‌ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಾರಿನಲ್ಲಿ ಹೋಗುವಾಗ ದಿಲೀಪ್‌ ಚಾಕುವಿನಿಂದ ಪವನ್ ಹಾಗೂ ಕಿರಣ್ ಮೇಲೆ ಹಲ್ಲೆ ನಡೆಸಿದ್ದರು. ಗಾಯಾಳುಗಳಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ದಿಲೀಪ್‌ರನ್ನು ಕಾರಿನೊಳಗೆ ಇರಿಸಿ ಲಾಕ್‌ ಮಾಡಿ ತೆರೆಳಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಬಂದು ಗಂಡಸಿ ಠಾಣೆಯಲ್ಲಿ ದೂರು ನೀಡಿದ್ದರು. ಎಲ್ಲರನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು’ ಎಂದು ವಿವರಿಸಿದರು.

ಇದೇ ರೀತಿ ತಂಡದ ಸದಸ್ಯರು ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಅರ್ಪಿತಾಮೂಲಕ ಡಿ. 4 ರಂದು ತಮಿಳುನಾಡಿನ ನವೀನ್ ಕುಮಾರ್ ಎಂಬುವರನ್ನು ಪುರದಮ್ಮ ದೇವಾಲಯಕ್ಕೆ ಕರೆಸಿಕೊಂಡು, ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ₹ 1 ಲಕ್ಷ ನಗದು, 20 ಗ್ರಾಂ ಬೆಳ್ಳಿ ಸರ ದೋಚಿದ್ದರು. ಅರಸೀಕೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ನ. 20ರಂದು ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಚಿರಾಯಸ್ವಾಮಿ ಅವರಿಂದ ₹ 3 ಸಾವಿರ ನಗದು, ಮೊಬೈಲ್‌ ಪೋನ್‌ ಕಿತ್ತುಕೊಂಡಿದ್ದರು.

ಅಲ್ಲದೇ ಡಿ. 18ರಂದು ಚನ್ನರಾಯಪಟ್ಟಣದ ಶರತ್‌ ಎಂಬುವರನ್ನು ಅರಸೀಕೆರೆ ಮಾಲೇಕಲ್ಲು ತಿರುಪತಿ ಬಳಿ ಕರೆಸಿಕೊಂಡು ₹ 2 ಸಾವಿರ ನಗದು ಕಿತ್ತುಕೊಂಡು ಕಳುಹಿಸಿದ್ದರು. ಹಲವು ತಿಂಗಳ ಹಿಂದೆ ತಿಪಟೂರಿನ ಚಂದ್ರಶೇಖರ್‌ ಅವರನ್ನು ಗಾಂಧಿನಗರದ ತೋಟದ ಮನೆಗೆ ಕರೆಸಿಕೊಂಡು ₹ 3 ಲಕ್ಷ ಚೆಕ್‌ ಪಡೆದುಕೊಂಡಿದ್ದರು. ಇದು ಹನಿಟ್ರ್ಯಾಪ್‌ ಎಂದು ಅವರಿಗೆ ಗೊತ್ತಾಗುತ್ತಿದ್ದಂತ ಚೆಕ್‌ ಅನ್ನು ಹಿಂತಿರುಗಿಸಿದ್ದರು. ಈ ನಾಲ್ಕು ಘಟನೆಗಳ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಎಸ್‌ಪಿ ವಿವರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ, ಅರಸೀಕೆರೆ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.