ಹಾಸನ: ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹೊಳೆನರಸೀಪುರ ಠಾಣೆ ಹೆಡ್ ಕಾನ್‌ಸ್ಟೆಬಲ್ ಸಿ.ಬಿ. ನಟೇಶ್ (38) ನಗರ ಹೊರವಲಯದ ಗೆಂಡೆಕಟ್ಟೆ ಅರಣ್ಯದ ಬಳಿ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅರಕಲಗೂಡು ತಾಲ್ಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದವರಾದ ನಟೇಶ್, 2008ರಲ್ಲಿ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸಕ್ಕೆ ಸೇರಿದ್ದರು. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಒಂದು ತಿಂಗಳ ಹಿಂದೆ ಮುಂಬಡ್ತಿ ಪಡೆದು, ಹೊಳೆನರಸೀಪುರ ಪೊಲೀಸ್ ಠಾಣೆಗೆ ವರ್ಗವಾಗಿದ್ದರು.
ಮೂರು ತಿಂಗಳಿಂದ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಸಂಜೆ ಆಸ್ಪತ್ರೆಯಿಂದ ಕಾಣೆಯಾಗಿದ್ದರು. ಬಳಿಕ ಗೆಂಡೆಕಟ್ಟೆ ಆರಣ್ಯದ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ: ಸಿ.ಬಿ. ನಟೇಶ್ ಅವರ ಅಂತ್ಯಕ್ರಿಯೆಯನ್ನು ಚಿಕ್ಕಬೊಮ್ಮನಹಳ್ಳಿಯ ಅವರ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು. ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.