ಅರಕಲಗೂಡು: ತಾಲ್ಲೂಕಿನ ಅರೆ ಮಲೆನಾಡು ಹೋಬಳಿಯಾದ ಮಲ್ಲಿಪಟ್ಟಣ ಭಾಗದಲ್ಲಿ ಕಳೆದ ಕೆಲ ತಿಂಗಳಿನಿಂದ ಬೀಳುತ್ತಿರುವ ಮಳೆಯಿಂದ ರಸ್ತೆಯಲ್ಲಿ ಗುಂಡಿ, ಹೊಂಡಗಳಾಗಿದ್ದು, ವಾಹನ ಹಾಗೂ ಜನರ ಓಡಾಟಕ್ಕೆ ಪಡಿಪಾಟಲು ಪಡುವ ಸ್ಥಿತಿ ಒದಗಿದೆ.
ಮಲ್ಲಿಪಟ್ಟಣ- ಮಾಗೋಡು ಮಾರ್ಗದ ರಸ್ತೆಯಂತೂ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಕಾಡಾನೆಗಳ ಹಾವಳಿಗೆ ಸಿಲುಕಿ ನಲುಗುತ್ತಿರುವ ಮಲ್ಲಿಪಟ್ಟಣ ಹೋಬಳಿ ಭಾಗದ ಹಳ್ಳಿಗಳಲ್ಲಿ, ಹದಗೆಟ್ಟ ಸಂರ್ಪಕ ರಸ್ತೆಗಳೂ ಕೂಡ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ. ಮಳೆಗಾಲವಾದ ಕಾರಣ ಅಲ್ಲಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ, ಈಗ ಹೊಂಡಗಳು ಬಾಯ್ತೆರೆದು ವಾಹನಗಳ ಓಡಾಟಕ್ಕೆ ಸಂಚಕಾರ ತಂದೊಡ್ಡಿದೆ.
ಹೋಬಳಿ ಕೇಂದ್ರ ಮಲ್ಲಿಪಟ್ಟಣದಿಂದ ಮಾಗೋಡು ಮಾರ್ಗವಾಗಿ ಪಾರಸನಹಳ್ಳಿ, ಮಾಗೋಡು ಎಚ್.ಆರ್.ಪಿ. ಕಾಲೊನಿ, ದಾಸನಪುರ, ಮಣಜೂರು, ನೆಲಬಳ್ಳಿ, ಕೆಂದಿಣ್ಣೆ, ಹೊಸಳ್ಳಿ, ಮಸರಂಗಾಲ ಕಡೆಗೆ ಮುಖ್ಯ ರಸ್ತೆ ಇದೆ. ಈ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳು, ದ್ವಿಚಕ್ರ ವಾಹನಗಳಲ್ಲದೇ ಈ ಭಾಗದ ಹಲವಾರು ಹಳ್ಳಿಗಳ ಗ್ರಾಮಸ್ಥರು ಸಂಚರಿಸಬೇಕಾಗಿದೆ. ಆದರೆ ರಸ್ತೆಯಲ್ಲಿ ಹೆಜ್ಜೆಗೊಂದು ಗುಂಡಿ ಬಿದ್ದು ವಾಹನ ಸವಾರರು ಸರ್ಕಸ್ ಮಾಡಿಕೊಂಡು ಸಂಚರಿಸುವ ಸ್ಥಿತಿ ಎದುರಾಗಿದೆ.
ನಿತ್ಯ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಮಾತ್ರವಲ್ಲದೇ ಶಾಲಾ ಮಕ್ಕಳು ಕೂಡ ಹಾಳಾದ ರಸ್ತೆಯಲ್ಲಿ ಓಡಾಡಲು ನರಕ ಯಾತನೆ ಅನುಭವಿಸಬೇಕಾಗಿದೆ. ಶಾಲಾ ವಾಹನಗಳು, ಕೂಲಿ ಕೆಲಸಕ್ಕೆ ಜನರನ್ನು ತುಂಬಿಕೊಂಡು ಹೋಗುವ ವಾಹನಗಳ ಸವಾರರಿಗೆ ನರಕದ ಗೋಳಾಗಿದೆ.
ರಸ್ತೆ ಕಿರಿದಾಗಿದ್ದು, ಕೆಸರುಮಯ ಗುಂಡಿಗಳಲ್ಲಿ ವಾಹನಗಳು ಎದುರು ಬದುರಾದರೆ ಮುಂದೆ ಚಲಿಸಲು ಜೀವ ಕೈಯಲ್ಲಿ ಹಿಡಿದು ಹರಸಾಹಸ ಪಡುವಂತಾಗಿದೆ. ರಾತ್ರಿ ವೇಳೆ ವಾಹನ ಸವಾರರು ಬಿದ್ದು ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ.
ಈ ಮಾರ್ಗದ ಮಾಗೋಡು ರಸ್ತೆ ಬದಿ ಕೆರೆಯಿದ್ದು, ಒಂದು ಕಡೆ ಕಂದಕ, ಮತ್ತೊಂದು ಕಡೆ ಕೆರೆಯ ಹಳ್ಳದ ಕಡೆಗೆ ತಿರುವಿನಿಂದ ಕೂಡಿದೆ. ಕಿರಿದಾದ ರಸ್ತೆಯಲ್ಲಿ ಡಾಂಬರ್ ಕಿತ್ತು ಗುಂಡಿಗಳಾಗಿದ್ದು, ವಾಹನ ಸವಾರರು ಜೀವಭಯದಲ್ಲೇ ಓಡಾಡುವಂತಾಗಿದೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿ ಪಡಿಸಿ, ಸಾರ್ವಜನಿಕರ ಓಡಾಟಕ್ಕೆ ಹಾಗೂ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ.
ಪ್ರವಾಸಿ ತಾಣಕ್ಕೆ ಹೋಗುವುದೂ ಕಷ್ಟ
ಈ ಮಾರ್ಗದ ರಸ್ತೆಗೆ ಹೊಂದಿಕೊಂಡಂತೆ ಪ್ರಸಿದ್ಧವಾದ ದಾಸನಪುರ- ಮಣಜೂರು ರಂಗನಾಥಸ್ವಾಮಿ ದೇವಸ್ಥಾನದ ಬೆಟ್ಟವಿದೆ. ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿರುವ ಬೆಟ್ಟದ ಮೇಲಿನ ಪ್ರಕೃತಿ ಸೌಂದರ್ಯ ಸವಿಯಲು ಅಪಾರ ಭಕ್ತರು ಹಾಗೂ ಪ್ರವಾಸಿಗರು ಈ ಮಾರ್ಗದಲ್ಲೇ ಬರಬೇಕು. ಅರಕಲಗೂಡು ಕಡೆಯಿಂದ ಮಸರಂಗಾಲ ಹಾಗೂ ಮಲ್ಲಿಪಟ್ಟಣ ಕಡೆಯಿಂದ ಮಾಗೋಡು ಮಾರ್ಗವಾಗಿ ಬೆಟ್ಟವೇರಲು ಬರುವ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯಿಸಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.