ADVERTISEMENT

ಒಳಗೆ ಸಭೆ; ಹೊರಗೆ ಪ್ರತಿಭಟನೆ

ಕಂದಾಯ ಸಚಿವರ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:27 IST
Last Updated 20 ಜೂನ್ 2019, 19:27 IST
ರೈತರು ಮತ್ತು ಗ್ರೀನ್‌ ಬಡ್ಸ್‌ ಅಗ್ರೊ ಫಾರ್ಮ್ಸ್‌ ಲಿ. ಕಂಪನಿಯ ಠೇವಣಿದಾರರ ಜತೆ ಸಚಿವ ಆರ್‌.ವಿ.ದೇಶಪಾಂಡೆ ಮಾತುಕತೆ ನಡೆಸಿದರು
ರೈತರು ಮತ್ತು ಗ್ರೀನ್‌ ಬಡ್ಸ್‌ ಅಗ್ರೊ ಫಾರ್ಮ್ಸ್‌ ಲಿ. ಕಂಪನಿಯ ಠೇವಣಿದಾರರ ಜತೆ ಸಚಿವ ಆರ್‌.ವಿ.ದೇಶಪಾಂಡೆ ಮಾತುಕತೆ ನಡೆಸಿದರು   

ಮೈಸೂರು: ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ಪ್ರಕೃತಿ ವಿಕೋಪ ಪರಿಹಾರ ಕ್ರಮ ಹಾಗೂ ಕಂದಾಯ ಇಲಾಖೆ ವಿಷಯಗಳ ಕುರಿತು ಗುರುವಾರ ಸಭೆ ನಡೆಸುತ್ತಿದ್ದಾಗ ಜಿಲ್ಲಾ ಪಂಚಾಯಿತಿ ಸಭಾಂಗಣದ ಹೊರಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ರೈತರು ಸಚಿವರನ್ನು ಭೇಟಿಯಾಗಲು ಬಂದಿದ್ದರು. ಆದರೆ ಮಧ್ಯಾಹ್ನದವರೆಗೂ ಭೇಟಿಗೆ ಅವಕಾಶ ಸಿಗದ ಕಾರಣ ಕೋಪಗೊಂಡು ಪ್ರತಿಭಟನೆ ನಡೆಸಿದರು.

‘ಸಚಿವರು ನಮ್ಮನ್ನು ಎರಡು ಗಂಟೆ ಕಾಯುವಂತೆ ಮಾಡಿದ್ದಾರೆ. ಸಭೆಯ ಮಧ್ಯದಲ್ಲಿ ಬಂದು ನಮ್ಮ ಅಹವಾಲು ಸ್ವೀಕರಿಸಬೇಕಿತ್ತು’ ಎಂದು ರೈತರು ಆರೋಪಿಸಿದರು.

ADVERTISEMENT

ಸಭೆಯ ಬಳಿಕ ರೈತರ ಬಳಿ ಬಂದ ಸಚಿವರು, ‘ಬೆಳಿಗ್ಗೆ 9.30 ಕ್ಕೆ ರೈತ ಮುಖಂಡರ ಜತೆ ಮಾತುಕತೆಗೆ ಸಮಯ ನಿಗದಿಪಡಿಸಲಾಗಿತ್ತು. ನಾನು 9.40ಕ್ಕೆ ಬಂದಿದ್ದೆ. ಆದರೆ ರೈತರು ಯಾರೂ ಬಂದಿರಲಿಲ್ಲ. 10.20ರ ವರೆಗೆ ಕಾದು ಕುಳಿತ ಬಳಿಕ ಸಭೆ ಆರಂಭಿಸಿದೆ. ರೈತರನ್ನು ಕಾಯುವಂತೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಮನವಿ ಸಲ್ಲಿಸಿದರು. ಗ್ರೀನ್‌ ಬಡ್ಸ್‌ ಅಗ್ರೊ ಫಾರ್ಮ್ಸ್‌ ಲಿ. ಕಂಪನಿಯಿಂದ ವಂಚನೆಗೊಳಗಾದ ಠೇವಣಿದಾರರೂ ಇದೇ ವೇಳೆ ಸಚಿವರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಗೊಂದಲ ನಿವಾರಿಸಬೇಕು. ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಹೊಸ ಸಾಲ ಕೊಡಿಸಬೇಕು. ಕೊಳವೆ ಬಾವಿ ಬೆಳೆ ನಷ್ಟವನ್ನು ಬರ ಪರಿಹಾರ ಕಾರ್ಯಕ್ರಮದಲ್ಲಿ ತುಂಬಿ ಕೊಡಬೇಕು ಎಂದು ರೈತರು ಆಗ್ರಹಿಸಿದರು.

ಮನವಿಗಳನ್ನು ಆಲಿಸಿದ ಸಚಿವರು, ಎಲ್ಲ ಬೇಡಿಕೆಗಳನ್ನು ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಗ್ರೀನ್‌ ಬಡ್ಸ್ ಕಂಪನಿ ಆಸ್ತಿ ಹರಾಜಿಗೆ ಬೇಕಾದ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಅವರಿಗೆ ಸೂಚಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮತ್ತು ಇತರ ಮುಖಂಡರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.