ADVERTISEMENT

ಹಾಸನ: ಪ್ರೀತಂ ಗೌಡಗೆ ತಪ್ಪಿದ ಮಂತ್ರಿ ಸ್ಥಾನ

ಸಚಿವ ಸಂಪುಟ: ಹಾಸನಕ್ಕೆ ದೊರಕದ ಪ್ರಾತಿನಿಧ್ಯ

ಕೆ.ಎಸ್.ಸುನಿಲ್
Published 4 ಆಗಸ್ಟ್ 2021, 15:00 IST
Last Updated 4 ಆಗಸ್ಟ್ 2021, 15:00 IST
ಪ್ರೀತಂ ಜೆ ಗೌಡ
ಪ್ರೀತಂ ಜೆ ಗೌಡ   

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಚಿವ ಸಂಪುಟದಲ್ಲಿ ಈ ಬಾರಿಯಾದರೂ ಹಾಸನ ಜಿಲ್ಲೆಗೆ ಪ್ರಾತಿನಿಧ್ಯ ದೊರಕಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರಿಗೆ ಮಂತ್ರಿಸ್ಥಾನ ತಪ್ಪಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಜತೆ ಗುರುತಿಸಿಕೊಂಡಿರುವ ಪ್ರೀತಂ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಸಚಿವ ಸ್ಥಾನವನ್ನು ನೀಡಬೇಕು ಎಂಬ ಈ ಭಾಗದಕಾರ್ಯಕರ್ತರು ಮತ್ತು ಮುಖಂಡರ ಆಗ್ರಹವು ವರಿಷ್ಠರ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.

ಸ್ವತಃ ಪ್ರೀತಂಗೌಡ ಅವರೇ ಈ ಬಾರಿಗೆ ಅವಕಾಶ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದರು. ಇದೇ ಕಾರಣಕ್ಕೆ ಈ ಹಿಂದೆ ನೀಡಿದ್ದ ನಿಗಮ ಮಂಡಳಿ ಸ್ಥಾನವನ್ನು ತಿರಸ್ಕರಿಸಿ, ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು.ಅವರ ಬೆಂಬಲಿಗರು, ಅಭಿಮಾನಿಗಳು ಸಂಭ್ರಮಾಚರಣೆಗೆ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದರು.

ADVERTISEMENT

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆದಂತೆಯೇ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲೂ ಹಾಸನ ಕಡೆಗಣಿಸಲ್ಪಟ್ಟಿದೆ.ಬಿಜೆಪಿ ಅಧಿಕಾರವಧಿಯಲ್ಲಿ ಹೊರ ಜಿಲ್ಲೆಯ ಶಾಸಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸ್ಥಾನ ನೀಡುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಇದೆ.

ಪ್ರಥಮ ಬಾರಿಗೆ ಆಯ್ಕೆಯಾಗಿರುವ ಪ್ರೀತಂ ಗೌಡ ಅವರ ವೈಯಕ್ತಿಕ ವರ್ಚಸ್ಸು,ಕಾರ್ಯವೈಖರಿ, ಪ್ರಭಾವ ಮೂಲೆಗುಂಪಾಗಿದೆ. ಈ ಬಾರಿಯಾದರೂ ಸ್ಥಾನ ಕೊಡಲೇಬೇಕುಎಂದು ಶಾಸಕರು ತಮ್ಮ ಹಿತೈಷಿ ಹಿರಿಯರ ಮೂಲಕ ಗಮನ ಸೆಳೆದಿದ್ದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂಡದ ಪ್ರಮುಖ ಸದಸ್ಯರಾಗಿಗುರುತಿಸಿಕೊಂಡಿದ್ದ ಪ್ರೀತಂ, ಕೆ.ಆರ್‌.ಪೇಟೆ, ಶಿರಾ ಹಾಗೂ ಮಸ್ಕಿ ಚುನಾವಣೆಗಳಲ್ಲಿ ಪಕ್ಷದಪ್ರಚಾರ ಹೊಣೆ ಹೊತ್ತಿದ್ದರು. ತಮ್ಮ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆದೊಯ್ದು ಪ್ರಚಾರದಲ್ಲಿತೊಡಗಿಸುವ ಜತೆಗೆ, ಪ್ರಚಾರ ತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಎಸ್‌ವೈಕುಟುಂಬದೊಂದಿಗಿನ ಅವರ ಬಾಂಧವ್ಯ ಮುಂದುವರಿದಿತ್ತು.

ಪಕ್ಷದ ಹಲವು ಹಿರಿಯರಿಗೆ ಸಚಿವ ಸ್ಥಾನ ನೀಡಲಾಗಿದೆ. ಪ್ರೀತಂ ಯುವಕರಾಗಿರುವುದರಿಂದಅವರನ್ನು ಹಿಂದಿಕ್ಕಿ ಇವರಿಗೆ ಸ್ಥಾನಮಾನ ನೀಡುವುದಕ್ಕೆ ಹೈಕಮಾಂಡ್‌ ನಿರಾಕರಿಸಿದೆ ಎಂದು ಎನ್ನಲಾಗಿದೆ.

ಪ್ರೀತಂ ಗೌಡರಿಗೆ ಸಚಿವ ಸ್ಥಾನನೀಡಿದ್ದರೆ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿ ಬೆಳೆಯುವ ಅವಕಾಶಸೃಷ್ಟಿಯಾಗುತ್ತಿತ್ತು. ಆ ಸಮುದಾಯದ ಮತಬ್ಯಾಂಕ್‌ ತಮ್ಮ ಪಕ್ಷದೆಡೆಗೆ ಸೆಳೆಯುವಲ್ಲಿ ಅವರು
ಸಫಲರಾಗುತ್ತಿದ್ದರು.ಮಂತ್ರಿಸ್ಥಾನ ತಪ್ಪಿದ್ದು ಜಿಲ್ಲೆಗೆ ನಷ್ಟ ಎನ್ನಲಾಗಿದೆ. ಶಾಸಕರಾಗಿದ್ದಾಗಲೇ ತಮ್ಮ ಕ್ಷೇತ್ರಕ್ಕೆ ಭರಪೂರ ಅನುದಾನ ತಂದಿದ್ದರು. ರಿಂಗ್‍ ರಸ್ತೆಗೆ ಮುಕ್ತಿ, ಯುಜಿಡಿ, ಕೆರೆ-ಪಾರ್ಕ್ ಅಭಿವೃದ್ಧಿ, ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿದ್ದರು.ಮುಂದಿನ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಗೂ ಪಕ್ಷ ಬಲವರ್ಧನೆಗೆ ಅನುಕೂಲವಾಗುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ.

ಮೈತ್ರಿ ಸರ್ಕಾರ ಪತನದ ನಂತರ ಅಸ್ತಿತ್ವಕ್ಕೆ ಬಂದ ಬಿ.ಎ.ಸ್‌. ಯಡಿಯೂರಪ್ಪ ನೇತೃತ್ವದಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ದೊರಕಲಿಲ್ಲ. ಹಲವು ಯೋಜನೆಗಳಿಗೆ ಅನುದಾನತಡೆಹಿಡಿಯಲಾಯಿತು.

‘ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವಷ್ಟು ದೊಡ್ಡವನಲ್ಲ. ಆದರೆ, ಹೈಕಮಾಂಡ್‌ ನೀಡುವಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದು ಪ್ರೀತಂ ಗೌಡ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.