ಹಾಸನ: ‘ದೇಶದ ಆರ್ಥಿಕತೆ ದುಡಿಯುವ ಜನರಿಗಲ್ಲ ಎಂಬ ಸ್ಥಿತಿ ನಿರ್ಮಿಸಿರುವ ಬಂಡವಾಳಶಾಹಿಗಳಿಗೆ ಪರ್ಯಾಯ ಶಕ್ತಿಯಾಗಿ ದುಡಿಯುವ ಜನತೆ ಎದ್ದು ನಿಲ್ಲಲಿದೆ’ ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಪ್ರತಿಪಾದಿಸಿದರು.
ನಗರದಲ್ಲಿ ಶನಿವಾರ ಸಿಐಟಿಯು ಆಯೋಜಿಸಿದ್ದ ಹಾಸನ ಜಿಲ್ಲಾ 7ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳಿಂದ ಜನರು ಬೀದಿಗೆ ಬರುವಂತಾಗಿದೆ. ಇನ್ನೊಂದೆಡೆ ಅಂತರರಾಷ್ಡ್ರೀಯ ಮಟ್ಟದಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. ದೇಶದ ಅಭಿವೃದ್ದಿ ಆಗಬೇಕು, ದೇಶವನ್ನು ಉಳಿಸಬೇಕು ಎಂದರೆ ಕಾರ್ಮಿಕರು ಹೆಚ್ಚು ದುಡಿಯಬೇಕು ಎಂದು ಬಂಡವಾಳಶಾಹಿಗಳು ಹೇಳುತ್ತಿದ್ದಾರೆ. ಇವತ್ತಿನ ಬೆಲೆ ಏರಿಕೆಗೆ ಬಂಡವಾಳಶಾಹಿಗಳು, ದೊಡ್ಡ ವ್ಯಾಪಾರಿಗಳು ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂಲಕಾರಣ ಎಂದು ಅವರು ಆಪಾದಿಸಿದರು.
ಕರ್ನಾಟಕ ಸರ್ಕಾರ ಒಂದೇ ಕಂಪನಿಗೆ ₹ 16 ಸಾವಿರ ಕೋಟಿ ಖರ್ಚು ಮಾಡಿದೆ. ಆದರೆ ಇಲ್ಲಿ ಬಡವರಿಗೆ ₹ 2 ಸಾವಿರ ಕೊಟ್ಟರೆ ಅಥವಾ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿದರೆ, ಸರ್ಕಾರ ಹಾಗೂ ಜನರನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಂಡು ಜಾಡಿಸುತ್ತವೆ. ಇಲ್ಲಿ ಕೆಲವರೇ ಶ್ರೀಮಂತರಾದರೆ ಸಮಸ್ಯೆ ಇಲ್ಲ. ಬಡಜನರಿಗೆ ಒಳ್ಳೆಯ ಸಂಬಳ ಕೊಟ್ಟರೆ, ಸಣ್ಣ ಶ್ರೀಮಂತರಾದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದರು.
ದುಡಿಮೆಗೆ ತಕ್ಕ ಕೂಲಿ ಕೇಳುವುದು ಮೂಲಭೂತ ಹಕ್ಕಲ್ಲ. ಕೂಲಿ ಜಾಸ್ತಿ ಕೇಳುವ ಹಾಗಿಲ್ಲ. ಎಂಬ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳನ್ನು ಎದುರಿಸಬೇಕಾದರೆ ದುಡಿಯುವ ಜನರು ಒಟ್ಟಾಗಿ ಹೋರಾಟ ಮಾಡುವುದೇ ಪರಿಹಾರ ಎಂದರು.
ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ , ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದುಡಿಯುವ ಜನರನ್ನು ಹಳೆಕಾಲದ ಶೋಷಣೆಗೆ ಮತ್ತೆ ಕರೆದೊಯ್ಯುತ್ತಿವೆ. ದುಡಿಯುವ ಜನರಿಗೆ ಕೂಲಿ ಸಿಗದಿದ್ದರೆ ಅವರಿಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಹೋರಾಟ ಮಾಡಿ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಮಿಕ ಮುಖಂಡ ಪಿ. ಸತ್ಯನಾರಾಯಣ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು. ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಮುಂಜುನಾಥ್, ಡಿಎಚ್ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ., ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್ ಉಪಸ್ಥಿತರಿದ್ದರು.
ಸಮಾಜವಾದ ವ್ಯವಸ್ಥೆಯಿಂದ ಅಭಿವೃದ್ಧಿ
ಕಾರ್ಮಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳಿಗೆ ಬಲಿಯಾಗುತ್ತಿದ್ದಾರೆ. ದೇಶ ತತ್ತರಿಸುತ್ತಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಹೇಳಿದರು. ಪ್ಯಾಲೆಸ್ಟೇನ್‌ನಲ್ಲಿ ಮಕ್ಕಳು ಮಹಿಳೆಯರು ಇಸ್ರೇಲ್ ದಾಳಿಗೆ ಬಲಿಯಾಗುತ್ತಲೇ ಇದ್ದಾರೆ. ದೇಶ ದೇಶಗಳ ನಡುವೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿದ್ದೆ. ಜಗತ್ತಿನ ಸರ್ವನಾಶಕ್ಕೆ ಅಮೆರಿಕ ಮುದಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು. ಬಂಡವಾಳಶಾಹಿಗಳ ಮುಖವಾಡವೂ ಕಳಚುತ್ತದೆ. ಯುದ್ದ ಭಯೋತ್ಪಾದನೆ ಬಂಡವಾಳಶಾಹಿ ನೀತಿಗಳಿಂದ ಎಲ್ಲ ದೇಶಗಳು ನಲುಗುತ್ತಿವೆ ಇದಕ್ಕೆ ಪರಿಹಾರವೆಂದರೆ ಸಮಾಜವಾದ ವ್ಯವಸ್ಥೆ ಮಾತ್ರ ಎಂದರು.
ಎಂಟು ತಿಂಗಳ ಒಳಗಿನ ಕರುವನ್ನು ವಿದೇಶಕ್ಕೆ ರಫ್ತು ಮಾಡುವುದರಲ್ಲಿ ಭಾರತ ಒಂದನೇ ಸ್ಥಾನದಲ್ಲಿದೆ. ರಫ್ತು ಮಾಡುತ್ತಿರುವವರೆಲ್ಲರೂ ಅದೇ ಹಿಂದೂ ಸಮಾಜದ ಬಂಡವಾಳಿಗರು.–ಮೀನಾಕ್ಷಿ ಸುಂದರಂ, ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.