ADVERTISEMENT

ಹಾಸನ: ಪ್ರಿಕಾಟ್‌ ಕಂಪನಿಯ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಕಂಪನಿಯ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:13 IST
Last Updated 6 ಅಕ್ಟೋಬರ್ 2025, 6:13 IST
ಹಾಸನದ ಪ್ರಿಕಾಟ್‌ ಕಂಪನಿಯ ಎದುರು ಗುತ್ತಿಗೆ ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದರು
ಹಾಸನದ ಪ್ರಿಕಾಟ್‌ ಕಂಪನಿಯ ಎದುರು ಗುತ್ತಿಗೆ ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದರು   

ಹಾಸನ: ಸಂಬಳ ಹೆಚ್ಚಳ, ನೌಕರಿ ಕಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ನಗರದ ಕೈಗಾರಿಕಾ ಪ್ರದೇಶದ ಪ್ರಿಕಾಟ್ ಲಿಮಿಟೆಡ್ ಸಂಸ್ಥೆಯ ಗುತ್ತಿಗೆದಾರ ಕಾರ್ಮಿಕರು ಭಾನುವಾರ ಮುಷ್ಕರ ನಡೆಸಿದರು.

ಹಲವು ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಸಂಬಳದಲ್ಲಿ ಯಾವುದೇ ಗಣನೀಯ ಹೆಚ್ಚಳವಾಗಿಲ್ಲ. 2025ರ ಮಾರ್ಚ್‌ನಲ್ಲಿ ಪ್ರಸ್ತುತ ವೇತನ ಒಪ್ಪಂದ ಮುಗಿಯುತ್ತಿದ್ದು, ಮುಂದಿನ 3 ವರ್ಷಗಳ ಅವಧಿಗೆ ಹೊಸ ವೇತನ ಇತ್ಯರ್ಥ ಮತ್ತು ಸೇವಾ ಷರತ್ತುಗಳನ್ನು ನಿಗದಿಪಡಿಸಲು ಬೇಡಿಕೆ ಪತ್ರವನ್ನು ಸಲ್ಲಿಸಲಾಗಿದೆ ಎಂದರು.

2023ರ  ಜನವರಿ 20 ರಂದು ನಡೆದ ವೇತನ ಒಪ್ಪಂದವು 2026 ರ ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಆ ಸಮಯದಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ನಡುವೆ ಒಪ್ಪಂದವಾಗಿ, ಮುಂದಿನ ಇತ್ಯರ್ಥಕ್ಕೆ ಕನಿಷ್ಠ ಆರು ತಿಂಗಳ ಮುಂಚಿತವಾಗಿ ಬೇಡಿಕೆ ಪತ್ರ ಸಲ್ಲಿಸುವ ಒಪ್ಪಿಗೆ ದೊರಕಿತ್ತು. ಅದರಂತೆ, ಈಗ ಹೊಸ ಬೇಡಿಕೆ ಪತ್ರವನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ADVERTISEMENT

2025 ಏಪ್ರಿಲ್ 1ರಿಂದ ಸಂಬಳದಲ್ಲಿ ಶೇ 40 ಹೆಚ್ಚಳ, 2026 ಏಪ್ರಿಲ್ 1ರಿಂದ ಶೇ 30 ಹೆಚ್ಚಳ, 2027 ಏಪ್ರಿಲ್ 1ರಿಂದ ಮತ್ತೆ ಶೇ 30ರಷ್ಟು ಹೆಚ್ಚಳ, ಸೇವಾ ತೂಕವಾಗಿ ಪ್ರತಿ ವರ್ಷಕ್ಕೆ ಶೇ 3 ಸಂಬಳ ನೀಡಬೇಕು. ಕಂಪನಿ ಸಾರಿಗೆ ಬಳಸದೇ ಬರುವ ಕಾರ್ಮಿಕರಿಗೆ ಪ್ರತಿ ತಿಂಗಳು ₹ 2ಸಾವಿರ ಪೆಟ್ರೋಲ್ ಭತ್ಯೆ, ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ 30 ಬೋನಸ್, ಪ್ರತಿ ವರ್ಷ ₹10ಸಾವಿರ ರಜೆ ಪ್ರಯಾಣ ಸಹಾಯ, ಕುಟುಂಬ ಸದಸ್ಯರಿಗೂ ನಗದು ರಹಿತ ವೈದ್ಯಕೀಯ ಸೌಲಭ್ಯ ಹಾಗೂ ಅನಾರೋಗ್ಯದ ಅವಧಿಯ ಸಂಬಳ ಪಾವತಿ, ಪಿತೃತ್ವ ರಜೆಯನ್ನು 10 ದಿನಗಳಿಗೆ ಹೆಚ್ಚಿಸುವುದು, ಸಂಗ್ರಹಿಸಬಹುದಾದ ಗಳಿಕೆ ರಜೆಯ ಮಿತಿ ತೆಗೆದುಹಾಕುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಿಕಾಟ್ ಲಿಮಿಟೆಡ್ ವರ್ಕರ್ಸ್‌ ಮತ್ತು ಎಂಪ್ಲಾಯೀಸ್ ಯೂನಿಯನ್‌ನ ಪ್ರವೀಣ್, ಎಐಟಿಯುಸಿ ಮುಖಂಡರಾದ ಬಿ.ಎಂ. ಮಧು, ಕಿರಣ್ ಕುಮಾರ್, ಎಲ್.ಬಿ. ಗಿರೀಶ್, ಎಂ.ಟಿ. ಪ್ರತಾಪ್‌, ಸಂಘಟನಾ ಕಾರ್ಯದರ್ಶಿ ಸೋಮನಾಥ್‌ ಪಡೆಸೂರು ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.