ADVERTISEMENT

ಪೆನ್‌ಡ್ರೈವ್ ಹಂಚಿಕೆ ಪ್ರಕರಣ: ಪ್ರೀತಂ ಆಪ್ತರ ಹೋಟೆಲ್‌, ಬಾರ್‌ನಲ್ಲಿ ಪರಿಶೀಲನೆ

ಎಸ್‌ಐಟಿ ತಂಡದಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 14 ಮೇ 2024, 15:44 IST
Last Updated 14 ಮೇ 2024, 15:44 IST
ಪ್ರೀತಂ ಗೌಡ
ಪ್ರೀತಂ ಗೌಡ   

ಹಾಸನ: ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಮಂಗಳವಾರ ನಗರಕ್ಕೆ ಬಂದಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಆಪ್ತರ ನಿವಾಸ, ಹೋಟೆಲ್ ಹಾಗೂ ಬಾರ್‌ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ 2 ವಾಹನಗಳಲ್ಲಿ ಬಂದಿದ್ದ ಎಸ್‌ಐಟಿ ಅಧಿಕಾರಿಗಳು, ಪ್ರೀತಂಗೌಡ ಆಪ್ತ ಕಿರಣ್‌ ಅವರ ಹೋಟೆಲ್‌ ಶ್ರೀಕೃಷ್ಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ಶರತ್‌ ಒಡೆತನದ ಕ್ವಾಲಿಟಿ ಬಾರ್ ಮೇಲೂ ದಾಳಿ ನಡೆಸಿದ್ದಾರೆ. ಅಲ್ಲದೆ ಪುನೀತ್‌ ನಿವಾಸದಲ್ಲಿಯೂ ಪರಿಶೀಲನೆ ನಡೆಸಿದರು.

ದೇವರಾಜೇಗೌಡ ಪೊಲೀಸ್‌ ವಶಕ್ಕೆ:

ADVERTISEMENT

ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ವಕೀಲ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರನ್ನು ಮಂಗಳವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದರು.

ನ್ಯಾಯಾಂಗ ಬಂಧನದಲ್ಲಿದ್ದ ದೇವರಾಜೇಗೌಡ ಅವರನ್ನು ಇಲ್ಲಿನ ಜಿಲ್ಲಾ ಕಾರಾಗೃಹದಿಂದ ತಮ್ಮ ಜೊತೆಗೆ ಕರೆದೊಯ್ದ ಹೊಳೆನರಸೀಪುರ ಪೊಲೀಸರು ಪ್ರಕರಣದ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ರಾತ್ರಿಯವರೆಗೆ ದೇವರಾಜೇಗೌಡರನ್ನು ಪೊಲೀಸ್‌ ಕಸ್ಟಡಿಗೆ ನೀಡಿ, ನ್ಯಾಯಾಲಯ ಆದೇಶಿಸಿತ್ತು.

ಈ ವೇಳೆ ಮಾತನಾಡಿದ ದೇವರಾಜೇಗೌಡ, ‘ಪೊಲೀಸರು ಅವರ ಪ್ರಕ್ರಿಯೆಗಳನ್ನು ಮಾಡುತ್ತಾರೆ ಬಿಡಿ’ ಎಂದಷ್ಟೇ ಹೇಳಿ ತೆರಳಿದರು.

ಹಾಸನಕ್ಕೆ ಐಜಿಪಿ ಅಮಿತ್ ಸಿಂಗ್‌ ಭೇಟಿ:

ದಕ್ಷಿಣ ವಲಯ ಐಜಿಪಿ ಅಮಿತ್‌ ಸಿಂಗ್ ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದು, ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯದ ವಿಡಿಯೊ ಪ್ರಕರಣದ ತನಿಖೆಯ ಕುರಿತು ಅಧಿಕಾರಿಗಳ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರು.

ಎಸ್ಪಿ ಮೊಹಮ್ಮದ್ ಸುಜೀತಾ, ಎಎಸ್ಪಿ ತಮ್ಮಯ್ಯ, ವೆಂಕಟೇಶ್ ನಾಯ್ಡು, ಡಿವೈಎಸ್ಪಿ, ಹೊಳೆನರಸೀಪುರದ ಪೊಲೀಸ್‌ ಅಧಿಕಾರಿಗಳ ಜೊತೆಗೆ ಮುಚ್ಚಿದ ಕೋಣೆಯಲ್ಲಿ ಸಭೆ ನಡೆಸಿದ ಅಮಿತ್ ಸಿಂಗ್, ತನಿಖೆಯ ಪ್ರಗತಿ ಕುರಿತು ಸಮಾಲೋಚನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.