ADVERTISEMENT

ಪಶ್ಚಿಮಘಟ್ಟದಲ್ಲಿ ಮೋಡಗಳ ಮೆರವಣಿಗೆ ನೋಡಲು ಅಂದ, ಮಳೆ ಬಂದರೆ ಬಲು ಚೆಂದ

ಜಾನೆಕೆರೆ ಆರ್‌.ಪರಮೇಶ್‌
Published 22 ಜೂನ್ 2019, 19:36 IST
Last Updated 22 ಜೂನ್ 2019, 19:36 IST
ಸಕಲೇಶಪುರದ ಪಶ್ಚಿಮಘಟ್ಟದ ಕೆಂಪುಹೊಳೆ ರಕ್ಷಿತ ಅರಣ್ಯದಲ್ಲಿ ಮೋಡಗಳ ಸುಂದರ ನೋಟ
ಸಕಲೇಶಪುರದ ಪಶ್ಚಿಮಘಟ್ಟದ ಕೆಂಪುಹೊಳೆ ರಕ್ಷಿತ ಅರಣ್ಯದಲ್ಲಿ ಮೋಡಗಳ ಸುಂದರ ನೋಟ   

ಮುಖ್ಯಾಂಶಗಳು

* ಜೂನ್‌ನಿಂದ ಡಿಸೆಂಬರ್‌ ವರೆಗೆ ಪಶ್ಚಿಮಘಟ್ಟದ ಬೆಟ್ಟಗಳ ಸಾಲಿನಲ್ಲಿ ಮೋಡಗಳ ಚೆಲ್ಲಾಟ

* ಹೆದ್ದಾರಿ ಪ್ರಯಾಣಿಕರ ಕಣ್ಣಿಗೆ ಹಬ್ಬ

ADVERTISEMENT

* ಪಶ್ಚಿಮಘಟ್ಟ ಒಡಲು ಬಗೆಯುವ ಯೋಜನೆಗಳಿಗೆ ಅವಕಾಶ ಬೇಡ

ಸಕಲೇಶಪುರ: ಪಶ್ಚಿಮಘಟ್ಟದ ಮೆಲೆನಾಡಿನ ಬೆಟ್ಟಗಳ ಸಾಲಿನಲ್ಲಿ ಮುಂಗಾರು ಮಳೆ ಮಾರುತಗಳ ಮೆರವಣಿಗೆ ಶುರುವಾಗಿದೆ. ನೋಡಲು ಎರಡು ಕಣ್ಣು ಸಾಲದು. ನಿಸರ್ಗದ ಈ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಸಕಲೇಶಪುರದಿಂದ ಹೆತ್ತೂರು, ವಣಗೂರು, ಬಿಸಿಲೆ ಮಾರ್ಗದ ರಾಜ್ಯ ಹೆದ್ದಾರಿ, ದೋಣಿಗಾಲ್, ಶಿರಾಡಿ ಘಾಟ್‌ ಮಾರ್ಗದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಆನೇಮಹಲ್‌–ಹಾನುಬಾಳು–ಮೂಡಿಗೆರೆ ಮಾರ್ಗದ ರಾಜ್ಯ ಹೆದ್ದಾರಿಗಳಲ್ಲಿ ನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು, ಅವುಗಳನ್ನು ತಬ್ಬಿಕೊಂಡಿರುವ ದಟ್ಟ ಮಳೆ ಕಾಡುಗಳು ಆ ಕಾಡಿನಿಂದ ಆಕಾಶದತ್ತ ಓಡುವ ಮೋಡಗಳ ಮನಮೋಹಕ ದೃಶ್ಯ ಕಣ್ಣಿಗೆ ಹಬ್ಬ, ನೋಡಿದಾಕ್ಷಣ ಮನದಲ್ಲಿ ಏನೋ ಆನಂದ, ಈ ಅಂದ ಮನೋಲ್ಲಾಸ ನೀಡುತ್ತದೆ.

ಜೂನ್‌ನಿಂದ ಡಿಸೆಂಬರ್‌ವರೆಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುತ್ತಾಡುವುದೇ ಒಂದು ಅದ್ಭುತವಾದ ಪ್ರವಾಸ. ಪ್ರತಿ ಕ್ಷಣವೂ ಮೋಡಗಳ ಆಕಾರ ಬದಲಾಯಿಸಿ ಮುಂದೆ ಸಾಗುವಾಗ ಹಸಿರು ಕಾನನದ ನಡುವೆ ಚಲಿಸಿದಂತಾಗುತ್ತದೆ. ಈ ಅದ್ಭುತ ದೃಶ್ಯ ನೋಡುವುದೇ ಒಂದು ಸುಯೋಗ.

ಜಲ ವಿದ್ಯುತ್‌ ಯೋಜನೆ, ಎತ್ತಿನಹೊಳೆ ಯೋಜನೆ, ಎಂಆರ್‌ಪಿಎಲ್‌ ಪೆಟ್ರೋಲಿಯಂ ಪೈಪ್‌ಲೈನ್‌, ಸಕಲೇಶಪುರ–ಸುಬ್ರಹ್ಮಣ್ಯ ರೈಲು ಮಾರ್ಗ ಹೀಗೆ ಹಲವು ಯೋಜನೆಗಳಿಗಾಗಿ ಪಶ್ಚಿಮಘಟ್ಟ ಸೀಳಿ ಹಾಕಿರುವುದರ ನಡುವೆಯೂ ಸಹ ಕೆಂಪುಹೊಳೆ, ಕೆಂಚನಕುಮರಿ, ಕಾಡಮನೆ, ಮೂರು ಕಣ್ಣುಗುಡ್ಡ, ಎಡಕುಮೇರಿ ರಕ್ಷಿತ ಅರಣ್ಯಗಳಲ್ಲಿ ಬೆಟ್ಟ, ಗುಡ್ಡ, ಹಸಿರು ಉಳಿದುಕೊಂಡಿದೆ. ಆದರೆ, ಇದರ ಗರ್ಭದಲ್ಲಿ ಹರಿಯುವ ನೂರಾರು ಝರಿ, ಜಲಪಾತ, ಹಳ್ಳ, ಕೊಳ್ಳಗಳು ಬತ್ತಿ ಹೋಗಿ ಅವುಗಳ ಸ್ವಾಭಾವಿಕತೆಗೆ ಭಾರಿ ಧಕ್ಕೆ ಉಂಟಾಗಿದೆ ಎನ್ನುವುದು ಅಷ್ಟೇ ವಾಸ್ತವ.

‘ಸಕಲೇಶಪುರದ ಉದ್ದಕ್ಕೂ ಹಬ್ಬಿರುವ ಪಶ್ಚಿಮಘಟ್ಟದ ಹಸಿರು ಸೆರಗು ಹರಿದುಹೋಗದಂತೆ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಇನ್ನು ಮುಂದೆಯಾದರೂ ಯಾವುದೇ ಅಭಿವೃದ್ಧಿ ಯೋಜನೆಗಳು ಈ ಭಾಗದಲ್ಲಿ ತಲೆ ಎತ್ತಲು ಅವಕಾಶ ನೀಡದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ’ ಎಂದು ಖಾಸಗಿ ವೈದ್ಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಅಶೋಕ ಆಚಾರ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.