ADVERTISEMENT

ಸಾಲ ಮನ್ನಾ ಯೋಜನೆ ದುರುಪಯೋಗ: ರೈತ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:29 IST
Last Updated 19 ಸೆಪ್ಟೆಂಬರ್ 2020, 12:29 IST
ಕೊಟ್ಟೂರು ಶ್ರೀನಿವಾಸ್‌
ಕೊಟ್ಟೂರು ಶ್ರೀನಿವಾಸ್‌   

ಹಾಸನ: ‘ಹಾಸನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಎಚ್‌ಡಿಸಿಸಿ) ಹಾಗೂ ಸಹಕಾರಿ ಸಂಘಗಳು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಬಡ್ಡಿ ದಂಧೆ ಕೋರರ ಹಿಡಿತಕ್ಕೆ ಸಿಲುಕಿರುವ ಕಾರಣ ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ’ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ಆರೋಪಿಸಿದರು.

‘ಹಿಂದೆ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಹಕಾರಿ ಕ್ಷೇತ್ರದ
ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ, ಈ ಸಾಲಮನ್ನಾ ಯೋಜನೆಯನ್ನು ಅನೇಕರು
ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು, ಒಂದೇ ಕುಟುಂಬದ ಎರಡು, ಮೂರು ಜನ ಈ
ಯೋಜನೆಯ ಲಾಭ ಪಡೆದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರರ ವಿರುದ್ಧ ಕಾನೂನು ಕ್ರಮ
ಕೈಗೊಳ್ಳಬೇಕು’ ಎಂದು ಶನಿವಾರ ಸುದ್ದಿಗೊಷ್ಠಿಯಲ್ಲಿ ಆಗ್ರಹಿಸಿದರು.

ರೈತ ಮುಖಂಡ ಬಳ್ಳೂರು ಶ್ರೀನಿವಾಸ್‌ ಗೌಡ ಮಾತನಾಡಿ, ‘ಎಚ್‌ ಡಿಸಿಸಿ ಬ್ಯಾಂಕ್‌ ಮತ್ತು ಕೃಷಿ ಪತ್ತಿನ
ಸಹಕಾರ ಸಂಘಗಳಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ
ಸೌಲಭ್ಯಗಳು ಬಲಾಢ್ಯರು ಮತ್ತು ಪ್ರಭಾವಿಗಳ ಪಾಲಾಗುತ್ತಿವೆ. ಬಹುತೇಕ ಸಹಕಾರಿ ಸಂಘಗಳಲ್ಲಿ
ಕಾಟಾಚಾರಕ್ಕೆ ವಾರ್ಷಿಕ ಮಹಾಸಭೆಗಳು ನಡೆಯುತ್ತಿವೆ’ಎಂದು ದೂರಿದರು.

ADVERTISEMENT

ಮುಖಂಡ ಜಯಣ್ಣ ಮಾತನಾಡಿ, ‘ಅರಸೀಕೆರೆ ತಾಲ್ಲೂಕಿನ ಚಿಕ್ಕಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ
ಭ್ರಷ್ಟಾಚಾರ ನಡೆದಿದ್ದು, ನಕಲಿ ದಾಖಲಾತಿ ಸಲ್ಲಿಸಿ 16 ಜನ ಸರ್ಕಾರಿ ನೌಕರರು ಸರ್ಕಾರದ ಸಾಲಮನ್ನಾ
ಯೋಜನೆಯ ಲಾಭ ಪಡೆದಿದ್ದಾರೆ. ಓಂಕಾರ ಮೂರ್ತಿ ಅವರ ಭಾವ, ಮೈದುನರ‌ ಕುಟುಂಬಕ್ಕೆ ₹ 12 ಲಕ್ಷ
ಸಾಲ ನೀಡಿದ್ದು, ಸುಮಾರು ₹ 5 ಲಕ್ಷ ಸಾಲ ಮನ್ನಾ ಮಾಡಲಾಗಿದೆ. ಕಾರ್ಯದರ್ಶಿ ರೇಣುಕಪ್ಪ ಮತ್ತು
ಮೇಲ್ವಿಚಾರಕ ಓಂಕಾರ ಮೂರ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ಎಂದು ಒತ್ತಾಯಿಸಿದರು.

‘ಸಹಕಾರ ಸಂಘವನ್ನು ಸೂಪರ್‌ ಸೀಡ್‌ ಮಾಡಿ ಸಂಪೂರ್ಣ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು. ಕೃಷಿ
ಪತ್ತಿನ ಸಹಕಾರ ಸಂಘ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಒಳ ಪಡದ ಕಾರಣ ಭ್ರಷ್ಟಾಚಾರ ಹೆಚ್ಚುತ್ತಿದೆ.
ಹಾಗಾಗಿ ಎಲ್ಲಾ ಸಹಕಾರ ಸಂಘಗಳನ್ನು ಮಾಹಿತಿ ಹಕ್ಕು ಅಧಿನಿಯಮದ ವ್ಯಾಪ್ತಿಗೆ ಒಳಪಡಿಸಬೇಕು’ ಎಂದು
ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಿವಲಿಂಗೇಗೌಡ, ಭೈರಪ್ಪ, ಸ್ವಾಮಿಗೌಡ, ಶಿವಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.