ಅರಕಲಗೂಡು: ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಕೃಷಿಕರಿಗೆ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ಖಂಡಿಸಿ ಮೇ 9ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್ ತಿಳಿಸಿದರು.
ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದ್ದು, ರೈತರ ಮೇಲೆ ತೀವ್ರವಾದ ಆರ್ಥಿಕ ಹೊರೆಬಿದ್ದಿದೆ. ಕೃಷಿಕರು ಜಮೀನಿಗೆ ತೆರಳಲು ಅಗತ್ಯವಾದ ಬಂಡಿ ರಸ್ತೆ ಹಾಗೂ ಕಾಲುದಾರಿಗಳನ್ನು ಇಲ್ಲಿಯವರೆಗೂ ಬಿಡಿಸಿಲ್ಲ. ತಾಲ್ಲೂಕಿನ ಏತ ನೀರಾವರಿ ವ್ಯಾಪ್ತಿಯ ಗ್ರಾಮಗಳ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು. ಬಾಕಿ ಇರುವ ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಅರಣ್ಯ ಇಲಾಖೆಯಲ್ಲಿ ಗಿಡ ನೆಟ್ಟಿರುವ ರೈತರಿಗೆ ಇದುವರೆಗೂ ಹಣ ಹಾಕಿಲ್ಲ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಕ್ರಮ ಕೈಗೊಂಡಿಲ್ಲ. ಸರ್ಕಾರಿ, ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಿಲ್ಲ. ಕೊಣನೂರಿನ ದೊಡ್ಡ ಕೆರೆ ಏರಿ ಬಿರುಕುಬಿಟ್ಟು ವರ್ಷವಾದರೂ ಲೋಕೋಪಯೋಗಿ ಇಲಾಖೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ, ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗಬೇಕಾದ ಸವಲತ್ತುಗಳು ಪ್ರಮಾಣಿಕ ರೈತರಿಗೆ ಸಿಗುತ್ತಿಲ್ಲ, ಕಳಪೆ ಗುಣಮಟ್ಟದ ಬೀಜ, ಕೀಟನಾಶಕ ಮತ್ತು ಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದರೂ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಸೆಸ್ಕ್‌ನಲ್ಲಿ ಈ ಹಿಂದೆ ಇದ್ದಂತಹ ಆಕ್ರಮ-ಸಕ್ರಮ ಯೋಜನೆಯನ್ನು ಮುಂದುವರೆಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳ, ಮತ್ತು ಔಷಧಗಳ ಕೊರತೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಗ್ರಾಮ ಪಂಚಾಯಿತಿ ಮತ್ತು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಜತೆಗೆ ಮೈಕ್ರೋ ಫೈನಾನ್ಸ್‌ಗಳು ಕಿರುಕುಳ ನೀಡುತ್ತಿದ್ದಾರೆ. ಇವೆಲ್ಲದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಇ. ಜಗದೀಶ್, ತಾಲೂಕು ಅಧ್ಯಕ್ಷ ಹೊಂಬೆಗೌಡ, ಕೊಣನೂರು ಹೋಬಳಿ ಅಧ್ಯಕ್ಷ ಮುನ್ನ ಸಾಬ್ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.