
ಚನ್ನರಾಯಪಟ್ಟಣ: ತಹಶೀಲ್ದಾರ್ ಕಾರ್ಯವೈಖರಿ ಖಂಡಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ತಹಶೀಲ್ದಾರ್ ಪರವಾಗಿ ವಿವಿಧ ಸಂಘಟನೆಯ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ತಾಲ್ಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ಪರವಾಗಿ ಪ್ರತಿಭಟನೆ ನಡೆಸಲಾಯಿತು.
ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಮಾತನಾಡಿ, ‘13 ದಿನಗಳಿಂದ ಕೆಲ ಸಂಘಟನೆಯ ಸದಸ್ಯರು ತಹಶೀಲ್ದಾರ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದರಿಂದ ಸಾರ್ವಜನಿಕರ ಕಚೇರಿ ಕೆಲಸಕ್ಕೆ ತೊಂದರೆಯಾಗುತ್ತಿದೆ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಚಳವಳಿ ದಿಕ್ಕು ತಪ್ಪಬಾರದು’ ಎಂದರು.
ದಲಿತ ಮುಖಂಡ ಸಿ.ಎನ್. ಮಂಜುನಾಥ್ ಮಾತನಾಡಿ, ‘ಕೆಲವು ದಲ್ಲಾಳಿಗಳು ಕಾನೂನು ಬಾಹಿರವಾಗಿ ಕೆಲಸ ಮಾಡಿಕೊಡುವಂತೆ ತಹಶೀಲ್ದಾರ್ ಮೇಲೆ ಒತ್ತಡ ಹಾಕಿದರು. ಅದಕ್ಕೆ ಒಪ್ಪದಿದ್ದಾಗ ಅನಗತ್ಯವಾಗಿ ತಹಶೀಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯನ್ನು ಸಾರ್ವಜನಿಕರು ಬೆಂಬಲಿಸುತ್ತಿಲ್ಲ. ತಹಶೀಲ್ದಾರ್ ವಿರುದ್ಧ ಪ್ರತಿಭಟನಕಾರರು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಸಚವ, ಸಂಸದ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಕ್ರಮ ವಹಿಸುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಬೇಕಿತ್ತು’ ಎಂದು ಹೇಳಿದರು.
ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಲಕ್ಷ್ಮಣ್, ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪ್ರಕಾಶ್, ಮುಖಂಡರಾದ ರವೀಶ್, ರವಿ ಸೇರಿ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.