ಹೆತ್ತೂರು ಹೋಬಳಿಯ ಬಿಸ್ಲೆ ಘಾಟ್‌ನಲ್ಲಿ ರಸ್ತೆ ಬದಿ ಭೂ ಕುಸಿತ ಆಗಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಭೇಟಿ ನೀಡಿ ಪರಿಶೀಲಿಸಿದರು
ಹೆತ್ತೂರು: ಹೋಬಳಿಯ ಹಡ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಸಾರ್ವಜನಿಕರ ಅಹವಾಲು ಆಲಿಸಿದರು.
ಕೆಲವು ಕುಟುಂಬಗಳಿಂದ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ವಿವರಿಸಿದ್ದರು. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಈ ವೇಳೆ ಭರವಸೆ ನೀಡಿದ್ದರು. ಅದರಂತೆ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದರು.
‘ಗ್ರಾಮದ ಸುಮಾರು 25 ಎಕರೆ ಪ್ರದೇಶದಲ್ಲಿ ಅನಾದಿ ಕಾಲದಿಂದ 160ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ದೇವಸ್ಥಾನ, ಸ್ಮಶಾನ, ಮಕ್ಕಳ ಸ್ಮಶಾನ ಸಹ ಇಲ್ಲಿದೆ. ಆದರೆ, ಕಾಲಕ್ರಮೇಣ ಗ್ರಾಮಸ್ಥರ ಗಮನಕ್ಕೆ ಬರದಂತೆ ವ್ಯಕ್ತಿಯೊಬ್ಬರಿಗೆ ವಾಸ ಪ್ರದೇಶವನ್ನು ಮಂಜೂರು ಮಾಡಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.
ಜಾಗ ಮಂಜೂರಾದ ವ್ಯಕ್ತಿ ಇದುವರಗೆ ಗ್ರಾಮಸ್ಥರಿಗೆ ಯಾವುದೇ ತೊಂದರೆ ನೀಡದ್ದರಿಂದ ಸಮಸ್ಯೆ ಆಗಿರಲಿಲ್ಲ. ಈಚೆಗೆ ಗ್ರಾಮ ದೇವರಿಗೆ ಹೊಸ ದೇವಸ್ಥಾನ ನಿರ್ಮಿಸಲು ಗ್ರಾಮಸ್ಥರು ಮುಂದಾಗಿದ್ದು, ಗುಡಿ ನಿರ್ಮಾಣಕ್ಕೆ ಅವಕಾಶ ನೀಡಿದ ಕುಟುಂಬ, ಇಡೀ ಗ್ರಾಮ ನಮಗೆ ಸೇರುತ್ತಿದೆ ಎಂದು ತೊಂದರೆ ನೀಡುತ್ತಿದೆ ಎಂದು ದೂರಿದರು.
ಯಾವುದೆ ಹೊಸ ನಿರ್ಮಾಣ ಕಾರ್ಯಕ್ಕೂ ಅವಕಾಶ ನೀಡುತ್ತಿಲ್ಲ. ಸಂಚರಿಸುವ ರಸ್ತೆಗೆ ಅಡ್ಡಿಪಡಿಸಲಾಗುತ್ತಿದೆ. ರಾತ್ರಿ ವೇಳೆ ಹೆಂಚುಗಳ ಮೇಲೆ ಕಲ್ಲುಬೀಳುತ್ತಿವೆ. ಒಟ್ಟಿನಲ್ಲಿ ನೆಮ್ಮದಿಯ ಜೀವನ ಇಲ್ಲದಾಗಿದೆ. ದಯವಿಟ್ಟು ಸಮಸ್ಯೆ ಬಗೆಹರಿಸಿ ಎಂದು ಅಲವತ್ತುಕೊಂಡರು.
ಈ ವೇಳೆ ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ, ಎರಡು ಕಕ್ಷಿದಾರರ ದಾಖಲೆ ಪರಿಶೀಲಿಸಿ ತಮಗೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಉಪ ವಿಭಾಗಾಧಿಕಾರಿ ರಾಜೇಶ್ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಸುಪ್ರೀತಾ, ಗ್ರಾಮದ ಮುಖಂಡರಾದ ರಥನ್, ರಾಮಚಂದ್ರೆಗೌಡ, ರಮೇಶ್ ಸೇರಿದಂತೆ ನೂರಾರು ಗ್ರಾಮಸ್ಥರು
ಉಪಸ್ಥಿತರಿದ್ದರು.
ಗ್ರಾಮಸ್ಥರಿಂದ ಹಲವು ಮನವಿ
ದೇವಸ್ಥಾನ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ: ಆರೋಪ
ಸಮಸ್ಯೆ ಬಗೆಹರಿಸಲು ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.