ADVERTISEMENT

ಕೋವಿಡ್‌ ಚಿಕಿತ್ಸಾ ದರ ಪ್ರಕಟಿಸಲಿ

ಖಾಸಗಿ ಆಸ್ಪತ್ರೆಗಳಿಗೆ ಶಾಸಕ ಎಚ್.ಡಿ.ರೇವಣ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 12:51 IST
Last Updated 19 ಏಪ್ರಿಲ್ 2021, 12:51 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತಿವೆ. ಕೂಡಲೇ ಚಿಕಿತ್ಸಾ ದರ ಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಪ್ರಕಟಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಮೊತ್ತವನ್ನು ಕೋವಿಡ್‌ ರೋಗಿಗಳಿಂದ ನಗರದ ಸ್ಪರ್ಶ್‌ ಆಸ್ಪತ್ರೆಯಲ್ಲಿ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆಸಾಕಷ್ಟುದೂರುಗಳು ಬಂದಿವೆ. ಜಿಲ್ಲಾಧಿಕಾರಿ ಅವರು ತಕ್ಷಣ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದು, ಶೇಕಡಾ 70ರಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿರಿಸಬೇಕು ಹಾಗೂ ಚಿಕಿತ್ಸಾ ದರ ಪಟ್ಟಿಯನ್ನು ಪ್ರಕಟಿಸಲು ಸೂಚನೆ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ದಿನದಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲು ಮಾಡದಂತೆ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಡಿವಾಣ ಹಾಕಬೇಕು. ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದು ಹೇಳಿದರು.

ADVERTISEMENT

ಸಾರ್ವಜನಿಕರು ಸಹ ಎರಡು, ಮೂರು ತಿಂಗಳು ಜಾಗೃತೆಯಿಂದ ಇರಬೇಕು. ಮಾಸ್ಕ್‌ ಧರಿಸಿ ಓಡಾಡಬೇಕು. ಸ್ಯಾನಿಟೈಸರ್‌ ಬಳಕೆ ಹಾಗೂ ಅಂತರ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಆರೋಗ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಕೆಲವರಿಗೆ ಆರು, ಹತ್ತು ಮತ್ತು ಒಂದು ವರ್ಷದ ಸಂಬಳ ನೀಡಿಲ್ಲ. ಇದರಲ್ಲೂ ಎರಡು ಸಾವಿರ ರೂಪಾಯಿ ಕಡಿತ ಮಾಡಲಾಗುತ್ತಿದೆ. ಮೊದಲೇ ಕಡಿಮೆ ವೇತನ. ಇಂತಹುದರಲ್ಲಿ ನೌಕರರು ಜೀವನ ನಡೆಸುವುದೇ ಹೇಗೆ ಎಂದು ಪ್ರಶ್ನಿಸಿದರು.

ಪ‍್ರತಿ ತಿಂಗಳು ನೌಕರರ ಖಾತೆಗೆ ಸಂಬಳ ಜಮಾ ಆಗುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರ ಜತೆ ಚರ್ಚಿಸಲಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ, ಪಂಗಡದವರು ಸರ್ಕಾರದ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿ ಎರಡು ವರ್ಷವಾದರೂ ಮೋಟರ್‌ ಅಳವಡಿಸಿಲ್ಲ. ರಾಜ್ಯ ಮಟ್ಟದ ಟೆಂಡರ್‌ ಆಗಿರುವ ಕಾರಣ ಸಮಸ್ಯೆ ಉಂಟಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾಧಿಕಾರಿ ಅವರು ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.