ADVERTISEMENT

ಹಳೇಬೀಡು | ಪುಷ್ಪಗಿರಿ ಕ್ಷೇತ್ರದ ಅಭಿವೃದ್ದಿ ಆಶ್ಚರ್ಯಕರ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:59 IST
Last Updated 21 ನವೆಂಬರ್ 2025, 6:59 IST
ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಕ್ರಮವನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.
ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಕ್ರಮವನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.   

ಹಳೇಬೀಡು: ಕೆಲವು ವರ್ಷಗಳಿಂದ ಪುಷ್ಪಗಿರಿ ಕ್ಷೇತ್ರದ ಬದಲಾವಣೆ ಆಶ್ಚರ್ಯ ಉಂಟು ಮಾಡಿದೆ. ಯಡಿಯೂರಪ್ಪನವರು ಕೊಟ್ಟ ಅನುದಾನ ಹಾಗೂ ಭಕ್ತರ ಸಹಕಾರದಿಂದ ಕ್ಷೇತ್ರವನ್ನು ನಾಡಿನ ಜನರು ತಿರುಗಿ ನೋಡುವಂತೆ ಅಭಿವೃದ್ಧಿ ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕಾರ್ತಿಕೋತ್ಸವ ಅಂಗವಾಗಿ ಇಲ್ಲಿನ ಪುಷ್ಪಗಿರಿ ಮಠದಿಂದ ಗುರುವಾರ ರಾತ್ರಿ ಆಯೋಜಿಸಿದ್ದ ಲಕ್ಷ ದೀಪೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂದೆಯವರು ಮಠ– ಮಾನ್ಯಗಳಿಗೆ ಅನುದಾನ ಕೊಡುವುದನ್ನು ಕೆಲವರು ವಿರೋಧಿಸಿದರು. ಟೀಕೆ ಪರಿಗಣಿಸದೇ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಮಠಗಳಿಗೆ ಶಕ್ತಿ ತುಂಬಲು ಮಠಗಳಿಗೆ ಯಡಿಯೂರಪ್ಪನವರು ಅನುದಾನ ನೀಡಿದರು ಎಂದರು.

ADVERTISEMENT

ಸೋಮಶೇಖರ ಸ್ವಾಮೀಜಿಯವರು ಗ್ರಾಮೀಣಾಭಿವೃದ್ಧಿ ಸಂಸ್ಥೆ ರಚಿಸಿ, ನಾಡಿನ ಹಲವು ಜಿಲ್ಲೆಗಳ ಕುಟುಂಬಗಳನ್ನು ಮುನ್ನಡೆಸುತ್ತಿದ್ದಾರೆ. ಸ್ವಾಮೀಜಿ ಆರೋಗ್ಯ ಸೇವೆಯ ದೊಡ್ಡ ಕನಸು ಕಟ್ಟಿಕೊಂಡಿದ್ದಾರೆ. ಅವರ ಕನಸು ಸಾಕಾರಗೊಳಿಸಲು ನಾವು ಸಹಕಾರ ಕೊಡುತ್ತೇವೆ ಎಂದರು.

ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸವನ್ನು ಪೋಷಕರು ಮಾಡಬೇಕಾಗಿದೆ. ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಶಕ್ತಿಯನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ. ಸವಾಲುಗಳನ್ನು ಎದುರಿಸಿ ನಿಂತ ಯಡಿಯೂರಪ್ಪನವರು ರಾಜ್ಯವನ್ನು ಮುನ್ನಡೆಸಿದ್ದಾರೆ. ನಾನೂ ಅವರಂತೆಯೆ ಸವಾಲು ಎದುರಿಸಿ ನಿಂತು ಜನ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, 16 ವರ್ಷದಿಂದ ಪೀಠಾಧ್ಯಕ್ಷರಾಗಿ ಲಕ್ಷ ದೀಪೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಸೋಮಶೇಖರ ಶಿವಾಚಾರ್ಯ ಸ್ವಾಮಿಜಿ ಶ್ರಮದಿಂದ ಪುಷ್ಪಗಿರಿ ಪ್ರವಾಸಿ ತಾಣವಾಗಿದೆ. ಭೇದ ಭಾವವಿಲ್ಲದೇ ಸಮಾಜವನ್ನು ಸ್ವಾಮೀಜಿ ಕೊಂಡೊಯ್ಯುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೂ ಸ್ವಾಮೀಜಿ ಪಾದ ಬೆಳೆಸಿ ಆರೋಗ್ಯ ಸೇವೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.

ಮಾದಿಹಳ್ಳಿ, ಹಳೇಬೀಡು ಹೋಬಳಿಯ ನೀರಿನ ಬವಣೆ ತಪ್ಪಿಸಲು ಯಡಿಯೂರಪ್ಪನವರು ರಣಘಟ್ಟ ಯೋಜನೆಗೆ ಚಾಲನೆ ನೀಡಿರುವುದನ್ನು ಮರೆಯುವಂತಿಲ್ಲ. ಅವರ ಪುತ್ರ ಬಿ.ವೈ.ವಿಜಯೇಂದ್ರ ತಂದೆಯ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ವಿಜಯಣ್ಣ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಸಿದ್ದರಾಮಪ್ಪ, ಕಾರಾಗೃಹ ಡಿವೈಎಸ್‌ಪಿ ಎಚ್.ಜಿ. ಮಂಜುನಾಥ, ಉದ್ಯಮಿ ಕೊರಟಗೆರೆ ಪ್ರಕಾಶ್, ಹಳೇಬೀಡು ಕರಿಯಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ಸಿ.ತುಕಾರಾಂರಾವ್, ಉದ್ಯಮಿ ವಸಂತ ಶೇಖರ್, ಕಾಫಿ ಬೆಳೆಗಾರ ದಿವಾಕರ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕರಾದ ಸಿಮೆಂಟ್ ಮಂಜು, ತಿಮ್ಮಯ್ಯ, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ಪ್ರೀತಂ ಜೆ.ಗೌಡ, ತಹಶೀಲ್ದಾರ್ ಶ್ರೀಧರ ಕಂಕಣವಾಡಿ, ಪುಷ್ಪಗಿರಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್. ಮಧು, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಸ್.ಬಸವರಾಜು, ಜಿ.ಪಂ. ಮಾಜಿ ಅಧ್ಯಕ್ಷೆ ಹೇಮಾವತಿ ಮಂಜುನಾಥ್, ಯುವ ಮುಖಂಡ ಬಿ.ಎಂ.ಸಂತೋಷ್ ಇದ್ದರು. ಎಂ.ಸಿ. ಕುಮಾರ್ ನಿರೂಪಿಸಿದರು.

ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದ ಹಳೇಬೀಡಿನ ಪುಷ್ಪಗಿರಿ ಮಠ
ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಕ್ರಮವನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಮಠ ವೈದ್ಯಕೀಯ ಶಿಕ್ಷಣ ಕೋರ್ಸ್ ಆರಂಭ ಹಾಸನದಲ್ಲಿ ಬೃಹತ್ ಆಸ್ಪತ್ರೆ ನಿರ್ಮಾಣದ ಗುರಿ

ಪುಷ್ಪಗಿರಿ ಅಭಿವೃದ್ದಿಯಲ್ಲಿ ಯಡಿಯೂರಪ್ಪ ಪ್ರಮುಖರು. ವಿಜಯೇಂದ್ರ ಸಹ ಕ್ಷೇತ್ರದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಭಕ್ತರ ಸಹಕಾರದಿಂದ ಪುಷ್ಪಗಿರಿ ಭೂಕೈಲಾಸದಂತಾಗಿದೆ.
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ

ಹಣತೆಯ ಬೆಳಕಿನಲ್ಲಿ ಕಂಗೊಳಿಸಿದ ಪುಷ್ಪಗಿರಿ ಪುಷ್ಪಗಿರಿಯ 108 ಲಿಂಗ ಮಂದಿರ ಗುರು ಕರಿಬಸವೇಶ್ವರ ಅಜ್ಜಯ್ಯ ಮಂದಿರ ಆದಿಯೋಗಿ ಶಿವನ ವಿಗ್ರಹ ಹಾಗೂ ಮಠದ ಆವರಣ ಗುರುವಾರ ದೀಪಗಳಿಂದ ಕಂಗೊಳಿಸಿದವು. ಲಕ್ಷ ದೀಪೋತ್ಸವದಲ್ಲಿ ವಿವಿಧ ಊರಿನಿಂದ ಬಂದಿದ್ದ ಸಹಸ್ರಾರು ಭಕ್ತರು ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು. ವೇದ ಮಂತ್ರ ಘೋಷದೊಂದಿಗೆ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುರೋಹಿತ ವೃಂದದೊಂದಿಗೆ ವಿಶೇಷ ಪೂಜಾ ವಿಧಾನ ನಡೆಸಿದರು. ಪ್ರಧಾನ ಲಿಂಗಕ್ಕೆ ಶತರುದ್ರಾಭೀಷೇಕ ವಿವಿಧ ಬಗೆಯ ಹೂವುಗಳು ಹಾಗೂ ಬಿಲ್ವಾರ್ಚನೆ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಆದಿಯೋಗಿ ಶಿವನ ಪ್ರತಿಮೆಗೆ ಪೂಜೆ ನೆರವೇರಿಸಿ ಗಂಗಾರತಿ ನೇರವೇರಿಸಿದರು. ಮಠ ಹಾಗೂ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಪುಷ್ಪಗಿರಿ ಬೆಟ್ಟ ವರ್ಣಮಯವಾಗಿತ್ತು. 4 ಕಿ.ಮೀ. ದೂರದ ದ್ವಾರಸಮುದ್ರ ಕೆರೆ ಏರಿಯ ಮೇಲೆ ತೆರಳುವವರಿಗೆ ಪುಷ್ಪಗಿರಿ ಬೆಟ್ಟ ವಿಭಿನ್ನವಾಗಿ ಕಂಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.