ADVERTISEMENT

ಹೆಣ್ಣಾನೆಗೆ ರೇಡಿಯೊ ಕಾಲರ್ ಅಳವಡಿಕೆ

ಪುಂಡಾನೆ ಸೆರೆ ಆಪರೇಷನ್ ಶುರು, ಮೂರು ಆನೆ ಬಳಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 14:11 IST
Last Updated 20 ಜನವರಿ 2021, 14:11 IST
ಮಲೆನಾಡಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು.. (ಸಂಗ್ರಹ ಚಿತ್ರ)
ಮಲೆನಾಡಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು.. (ಸಂಗ್ರಹ ಚಿತ್ರ)   

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಜೀವ ಹಾನಿ ಹಾಗೂ ಬೆಳೆಹಾನಿಯಲ್ಲಿ ತೊಡಗಿರುವ ಪುಂಡಾನೆ ಸೆರೆ ಮತ್ತು ಆನೆಗಳ ಚಲನ ವಲನ ತಿಳಿಯಲು ಅನುಕೂಲವಾಗುವಂತೆ ಮೂರು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದ್ದು,ಜ.20 ರಿಂದಲೇ ಈ ಕಾರ್ಯ ಆರಂಭವಾಗಿದ್ದು, 27 ರ ವರೆಗೆ ಮುಂದುವರಿಯಲಿದೆ.

ಈ ಕಾರ್ಯಾಚರಣೆಗಾಗಿ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು ಸೇರಿದಂತೆ ಮೂರು ಪಳಗಿದ ಆನೆಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಈಗಾಗಲೇ ಈ ಮೂರು ಆನೆಗಳು ಆಲೂರು ತಾಲ್ಲೂಕು ನಾಗಾವರ ಆನೆಧಾಮಕ್ಕೆ ಬಂದಿವೆ.

ಈಗಾಗಲೇ ಯಾವ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂಬುದನ್ನು ಗುರುತು ಮಾಡಲಾಗಿದೆ.
ಗುಂಪು ಗುಂಪಾಗಿ ಸಂಚರಿಸುವ ಆನೆಗಳ ಚಲನವಲನ ಕಂಡು ಹಿಡಿದು, ಅವುಗಳಿಂದಾಗುವ ನಷ್ಟ ತಪ್ಪಿಸಲು ಪೂರಕವಾಗುವಂತೆ ಈ ಹಿಂದೆ ರೇಡಿಯೊ ಕಾಲರ್ ಅಳವಡಿಸಿದ್ದ ಮೂರು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಮರು ಅಳವಡಿಸಲು ನಿರ್ಧರಿಸಲಾಗಿದೆ.

ADVERTISEMENT

ಆನೆ ಸೆರೆ ಮತ್ತು ಕಾಲರ್ ಅಳವಡಿಕೆ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು, ಅರವಳಿಕೆ ತಜ್ಞರು, ವನ್ಯಜೀವಿ ವೈದ್ಯರು ಸೇರಿ 30 ಮಂದಿಯನ್ನೊಳಗೊಂಡ ತಂಡ ಅಣಿಗೊಳಿಸಲಾಗಿದೆ. ಕಾರ್ಯಾಚರಣೆ ಅವಧಿಯಲ್ಲಿ ನಿರ್ಧರಿಸಿದ ಸ್ಥಳಗಳ ರೈತರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್. ತಿಳಿಸಿದ್ದಾರೆ.

ರೇಡಿಯೊ ಕಾಲರ್ ಅಳವಡಿಸಿ ಆನೆಗಳನ್ನು ಅದೇ ಸ್ಥಳದಲ್ಲಿ ಬಿಡುವಂತೆ ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಸೂಚನೆ ನೀಡಿದ್ದಾರೆ.

ಮಲೆನಾಡು ಭಾಗದಲ್ಲಿ ಅದರಲ್ಲೂ ಆಲೂರು-ಸಕಲೇಶಪುರ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಡಾನೆ ಹಿಂಡು ಕಾಡಿನಿಂದ ನಾಡಿಗೆ ಬಂದು ಜೀವ ಹಾನಿ ಮಾಡುವುದರ ಜೊತೆಗೆ ಅಪಾರ ಪ್ರಮಾಣದ ಬೆಳೆ ಹಾಳು ಮಾಡುವ ಮೂಲಕ ರೈತರು ಹಾಗೂ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.