
ಹಿ.ಕೃ.ಚಂದ್ರು
ಹಿರೀಸಾವೆ: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ರಾಗಿ ಮಾರಾಟ ಮಾಡಲು ರೈತರು ತಮ್ಮ ಹೆಸರು ನೋಂದಾಯಿಸುತ್ತಿದ್ದಾರೆ. ಎರಡು ದಿನದಿಂದ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನೋಂದಣಿ ಕೇಂದ್ರ ತೆರೆಯಲಾಗಿದೆ.
ಮೊದಲ ದಿನ ಸರ್ವರ್ ಸಮಸ್ಯೆಯಿಂದ ನೋಂದಣಿ ಮಂದಗತಿಯಲ್ಲಿ ನಡೆಯಿತು. ಗುರುವಾರ ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ. ಆದರೆ ರೈತರು ಬೆಳಿಗ್ಗೆ ಗುಂಪು, ಗುಂಪಾಗಿ ಬಂದಿದ್ದು, ಮಧ್ಯಾಹ್ನ ನಂತರ ಸರದಿಯಲ್ಲಿ ಬಂದು ನೋಂದಾಯಿಸಿದರು.
2025–26ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಎಫ್‌ಎಕ್ಯೂ ಗುಣಮಟ್ಟದ ರಾಗಿ, ಭತ್ತ, ಬಿಳಿಜೋಳ, ಕಿರು ಸಿರಿಧಾನ್ಯಗಳನ್ನು ಖರೀದಿಸಲಾಗುತ್ತಿದೆ. ಈ ವರ್ಷ ಖರೀದಿಯ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಬದಲು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ನೀಡಲಾಗಿದೆ.
ಈ ಭಾಗದಲ್ಲಿ ಹೆಚ್ಚಾಗಿ ರಾಗಿ ಬೆಳೆಯುತ್ತಿದ್ದು, ಎಕರೆಗೆ 10 ಕ್ವಿಂಟಲ್‌ನಂತೆ ಒಬ್ಬ ರೈತ ಗರಿಷ್ಠ 50 ಕ್ವಿಂಟಲ್ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರೈತರು ನೋಂದಣಿ ಕೇಂದ್ರಕ್ಕೆ ಬಂದು, ಕೃಷಿ ಇಲಾಖೆ ನೀಡಿರುವ ಫ್ರೂಟ್ ಐಡಿ ಸಂಖ್ಯೆಯನ್ನು ನೀಡಿ, ಬೆರಳಚ್ಚು (ಬಯೋಮಟ್ರಿಕ್) ನೀಡುವ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುತ್ತಿದ್ದಾರೆ.
‘ಪ್ರತಿ ವರ್ಷದಂತೆ ಈ ವರ್ಷವೂ ವ್ಯಾಪಾರಸ್ಥರು, ರೈತರ ಮೂಲಕ ರಾಗಿ ಮಾರಾಟ ಮಾಡಲು ಮುಂದಾಗಿದ್ದು, ರೈತರನ್ನು ಕರೆ ತಂದು ನೋಂದಣಿ ಮಾಡಿಸುತ್ತಿದ್ದಾರೆ. ಬೆಳೆ ಸಮೀಕ್ಷೆ ನಮೂದು ಆಗದೇ ಇರುವುದರಿಂದ ರೈತರ ಬೆಳೆದಿರುವ ರಾಗಿ ಬೆಳೆಗೆ ಹೊಂದಾಣಿಕೆ ಆಗುತ್ತಿಲ್ಲ’ ಎನ್ನುತ್ತಾರೆ ರೈತರು.
ಬೆಳೆ ಸಮೀಕ್ಷೆ ಪೂರ್ಣಗೊಳ್ಳುವ ಮೊದಲೇ ನೋಂದಣಿ ಮಾಡಲಾಗುತ್ತಿದ್ದು ರೈತರಿಗೆ ತೊಂದರೆಯಾಗಿದೆ. ಬೆಳೆ ಸಮೀಕ್ಷೆ ಪೂರ್ಣವಾದ ನಂತರ ನೋಂದಣಿ ಮಾಡುವುದು ಒಳ್ಳೆಯದುಎಚ್.ಕೆ. ರಘು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ತಾಲ್ಲೂಕಿನ 6 ಕಡೆ ನೋಂದಣಿ
ಚನ್ನರಾಯಪಟ್ಟಣ ಹಿರೀಸಾವೆ ನುಗ್ಗೇಹಳ್ಳಿ ಶ್ರವಣಬೆಳಗೊಳ ಉದಯಪುರ ಬಾಗೂರಿನಲ್ಲಿ ಕೇಂದ್ರಗಳನ್ನು ತೆರೆದು ನೋಂದಣಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಜಿಲ್ಲಾ ವ್ಯವಸ್ಥಾಪಕಿ ಅನುರಾಧಾ ‘ಪ್ರಜಾವಾಣಿ’ಗೆ ತಿಳಿಸಿದರು. ನೋಂದಣಿಗೆ ಡಿ.15 ರವರೆಗೆ ಕಾಲಾವಕಾಶ ನೀಡಲಾಗಿದೆ. ಮುಂದಿನ ಜನವರಿ 1 ರಿಂದ ಮಾರ್ಚ್ 31ರವರೆಗೆ ರಾಗಿ ಖರೀದಿ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.