ADVERTISEMENT

ಆಲೂರು | ಮುಸುಕಿನ ಜೋಳಕ್ಕೆ ನಷ್ಟದ ಭೀತಿ

ಎಂ.ಪಿ.ಹರೀಶ್
Published 10 ಸೆಪ್ಟೆಂಬರ್ 2023, 5:31 IST
Last Updated 10 ಸೆಪ್ಟೆಂಬರ್ 2023, 5:31 IST
   

ಆಲೂರು: ಮಳೆ ಕಡಿಮೆ ಆಗಿರುವುದರಿಂದ ಮುಸುಕಿನ ಜೋಳದ ಬೆಳೆ ಒಣಗುತ್ತಿದೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದು, ಸಾಲ ಮಾಡಿ ಕೃಷಿ ಮಾಡಿರುವ ರೈತರು ಕಂಗಾಲಾಗಿದ್ದಾರೆ.  ಬಿತ್ತನೆಯಾದ ಪ್ರದೇಶ ಆಧರಿಸಿ  ₹ 150 ಕೋಟಿಗೂ ಅಧಿಕ ಬೆಳೆ ನಷ್ಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಏಪ್ರಿಲ್, ಮೇ ತಿಂಗಳಿನಲ್ಲಿ ಹದ ಮಳೆಯಾದಾಗ ಶೇ 70 ಕ್ಕೂ ಹೆಚ್ಚು ರೈತರು ಜೋಳ ಬಿತ್ತನೆ ಮಾಡಿದರು. ಆಗಾಗ ತುಂತುರು ಮಳೆಯಾಗಿ ಈಗ ಜೋಳ ಕಾಳುಗಟ್ಟಿದೆ. ಕಾಳು ಬಲಿಯ ಬೇಕಾದರೆ ಹದಮಳೆ ಅವಶ್ಯಕವಾಗಿದೆ. 25 ದಿನಗಳಿಂದ ಮಳೆಯಾಗದೇ ಬಹುತೇಕ ಬೆಳೆ ಬಿಸಿಲಿಗೆ ಒಣಗುತ್ತಿದೆ.

‘ನಾಲ್ಕು ತಿಂಗಳ ಅವಧಿಯ ಬೆಳೆಯಾಗಿರುವ ಜೋಳ ಕೊಯಿಲಿಗೆ ಸಿದ್ಧವಾಗಿದೆ. ಬಿಸಿಲ ತಾಪದಿಂದ ಕಾಳು ಬಲಿಯದೆ ಗಿಡಗಳು ಒಣಗುತ್ತಿವೆ. ಹೀಗೆ ಮುಂದುವರಿದರೆ 20 ದಿನಗಳಲ್ಲಿ ಕೊಯಿಲು ಮಾಡಬೇಕಿದೆ. ಇಳುವರಿ ಕುಂಠಿತವಾಗಿ, ತೂಕವೂ ಇಲ್ಲದೆ, ನಷ್ಟಕ್ಕೀಡಾಗುವ ಸಾಧ್ಯತೆ ಇದೆ’ ಎಂದು ರೈತರು ಹೇಳುತ್ತಿದ್ದಾರೆ.

ADVERTISEMENT

ಮಳೆ ಇಲ್ಲದೆ ಒಣಗುತ್ತಿರುವ ಬೆಳೆಯನ್ನು ರೈತರು ಕೊಯ್ದು ಜಾನುವಾರುಗಳಿಗೆ ಮೇವಾಗಿ ನೀಡುತ್ತಿದ್ದಾರೆ.

‘ಒಂದು ಎಕರೆ ಭೂಮಿಯಲ್ಲಿ ಜೋಳ ಬಿತ್ತನೆ ಮಾಡಲು ಕುಟುಂಬ ಸದಸ್ಯರ ಶ್ರಮ, ಉಳುಮೆ, ಬಿತ್ತನೆ ಬೀಜ, ರಾಸಾಯನಿಕಗೊಬ್ಬರ, ಕಾರ್ಮಿಕರ ಸಂಬಳ ಸೇರಿದಂತೆ ₹ 12 ಸಾವಿರ ವರೆಗೆ ಖರ್ಚಾ ಗುತ್ತದೆ. ಕೊಳವೆ ಬಾವಿ ಸೌಕರ್ಯವಿದ್ದರೂ ಸಾಕಷ್ಟು ನೀರು ದೊರಕದೆ, ನಿರಂತರ ವಿದ್ಯುತ್ ಸೌಲಭ್ಯವಿಲ್ಲದೆ ನೀರು ಹಾಯಿಸುವುದನ್ನೂ ಕೈಬಿಡುವಂತಾಗಿದೆ’ ಎಂದು ರೈತರು ದೂರುತ್ತಿದ್ದಾರೆ.

ತಾಲ್ಲೂಕಿನಲ್ಲಿ 3,134 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತನಾಟಿ ಮಾಡಲಾಗಿದೆ. 10,400 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಮಾಡಲಾಗಿದೆ. ಜೋಳ ಕೊಯಿಲಿಗೆ ಬಂದಿದ್ದರೂ ಗುಣಮಟ್ಟ ಇಲ್ಲದೇ, ಶೇ 60 ರಷ್ಟು ಇಳುವರಿ ಕುಂಠಿತವಾಗಿದೆ. ಜೊಳ್ಳು ಕಾಳು ಬಿದ್ದಿದೆ. ಗದ್ದೆಯಲ್ಲಿ ನೀರಿಲ್ಲದೆ ನೆಲಕಚ್ಚುವ ಪರಿಸ್ಥಿತಿ ನಿರ್ಮಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.