ADVERTISEMENT

ಹಿರೀಸಾವೆ: ರಂಗನಾಥಸ್ವಾಮಿ ಸಂಭ್ರಮದ ಬ್ರಹ್ಮರಥೋತ್ಸವ

ಬೂಕನಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮಖದಲ್ಲಿ ನಡೆದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 3:28 IST
Last Updated 20 ಜನವರಿ 2021, 3:28 IST
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 90ನೇ ಬ್ರಹ್ಮರಥೋತ್ಸವ ಮಂಗಳವಾರ ಜರುಗಿತು
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 90ನೇ ಬ್ರಹ್ಮರಥೋತ್ಸವ ಮಂಗಳವಾರ ಜರುಗಿತು   

ಹಿರೀಸಾವೆ: ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 90ನೇ ವರ್ಷದ ಬ್ರಹ್ಮರಥೋತ್ಸವವು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಸುಪ್ರಭಾತ, ಅಲಂಕಾರ, ನಿತ್ಯಸೇವೆ, ಅಗ್ನಿ ಪ್ರತಿಷ್ಠೆ, ಕಳಶ ಪ್ರತಿಷ್ಠೆ ಮತ್ತು ರಥಕ್ಕೆ ಅನ್ನ ಬಲಿ ಅರ್ಪಿಸಲಾಯಿತು. ಮಧ್ಯಾಹ್ನ 1–30ಕ್ಕೆ ಸಾವಿರಾರು ಭಕ್ತರು ರಂಗನಾಥನ ನಾಮಸ್ಮರಣೆ ಮಾಡುತ್ತಾ, ಮಂಗಳ ವಾದ್ಯದೊಂದಿಗೆ, ಭಕ್ತಿ ಭಾವದಿಂದ ರಥವನ್ನು ಎಳೆದು ಧನ್ಯತಾಭಾವ ಮೆರೆದರು. ರಥವು ಸಾಗುವಾಗ ಭಕ್ತರು ಬಾಳೆಹಣ್ಣು ಮತ್ತು ಧವನವನ್ನು ರಥದ ಕಳಸದತ್ತ ಎಸೆದು, ಹರಕೆ ತೀರಿಸಿದರು.

ತಾಲ್ಲೂಕು ಆಡಳಿತವು ಕೋವಿಡ್ 19 ಹಿನ್ನೆಲೆಯಲ್ಲಿ ರಥೋತ್ಸವವನ್ನು ರದ್ದುಪಡಿಸಿರುವುದಾಗಿ, ರಾಸು ಜಾತ್ರೆ ಆರಂಭದಲ್ಲಿ ತಿಳಿಸಿತ್ತು. ಆದರೆ, ಭಕ್ತರು ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಸಿದರು.

ADVERTISEMENT

ರಥೋತ್ಸವದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಎಪಿಎಂಸಿ ಅಧ್ಯಕ್ಷ ಶಿವಸ್ವಾಮಿ, ಮಾಜಿ ನಿರ್ದೇಶಕ ಅಮಾಸ್ಯೆಗೌಡ, ಹಿರೀಸಾವೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ್, ತಾ.ಪಂ. ಮಾಜಿ ಸದಸ್ಯರಾದ ರಾಮಕೃಷ್ಣ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಮ್, ಉಪ ತಹಶೀಲ್ದಾರ್ ಮೋಹನಕುಮಾರ್, ಪಾರುಪತ್ತೇದಾರ ರಂಗರಾಜು, ಮತಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಎಂ. ಪ್ರಕಾಶ್, ಬೂಕದ ವಾಸು, ಮಹೇಶ್, ಆರ್‌ವಿ ವೀರಾಜ್ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಂಗನಾಥಸ್ವಾಮಿಯ ಕೆಲ ಭಕ್ತರು ಜಾತ್ರೆಗೆ ಬಂದವರಿಗೆ ಉಪಾಹಾರ, ಪಾನಕ ಮತ್ತು ಮಜ್ಜಿಗೆ ನೀಡುವ ಮೂಲಕ ಹರಕೆ ಅರ್ಪಿಸಿದರು. ಹಿರೀಸಾವೆ ಪೊಲೀಸ್‌ ಠಾಣೆಯ ಎಸ್‌ಐ ಶ್ರೀನಿವಾಸ್ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.