
ಹಾಸನ: ‘ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ಜಗತ್ತಿನ ಇತರೆ ದೇಶಗಳ ಮೇಲೆ ದಾಳಿ ಮಾಡುವ, ಸುಂಕ ಏರಿಸುವ ಅಮೆರಿಕದ ನೀತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದಕ್ಕೆ ಪ್ರಬಲವಾದ ಪ್ರತಿರೋಧ ಒಡ್ಡುವ ಮೂಲಕ ಮಾತ್ರ ನಮ್ಮತನ ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಅಮೆರಿಕ ಸಾಮ್ರಾಜ್ಯಶಾಹಿ ಜಗತ್ತಿನ ಎಲ್ಲ ಸಂಪತ್ತನ್ನು ಲೂಟಿ ಮಾಡಲು ಮಿಲಿಟರಿ ಶಕ್ತಿಯನ್ನು ಬಳಸುತ್ತದೆ’ ಎಂದು ಲೇಖಕ ಕೆ.ಎಸ್.ರವಿಕುಮಾರ್ ಆರೋಪಿಸಿದರು.
ನಗರದ ಶ್ರಮ ಕಚೇರಿಯಲ್ಲಿ ಈಚೆಗೆ ಆಯೋಜಿಸಿದ್ದ ‘ಕೆಂಪು ಪುಸ್ತಕ ದಿನ’ ಕಾರ್ಯಕ್ರಮದಲ್ಲಿ ‘ಯು.ಎಸ್. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಗತ್ತಿನ ದುಡಿಯುವ ವರ್ಗದ ವಿಮೋಚನೆಗಾಗಿ ಕಾರ್ಲ್ ಮಾರ್ಕ್ಸ್ ಮತ್ತು ಫೆಡ್ರಿಕ್ ಏಂಗೆಲ್ಸರ್ ಅವರು ಜಂಟಿಯಾಗಿ ರಚಿಸಿದ ‘ಕಮ್ಯೂನಿಸ್ಟ್ ಪ್ರಣಾಳಿಕೆ’ ಕೃತಿಯು 1848ರ ಫೆ. 21 ರಂದು ಪ್ರಕಟಗೊಂಡಿತ್ತು. ಇದರ ನೆನಪಿಗಾಗಿ ಜಗತ್ತಿನ ಎಲ್ಲ ಪ್ರಗತಿಪರ ಮತ್ತು ಎಡ ಪುಸ್ತಕ ಪ್ರಕಾಶಕರು ಮತ್ತು ಸಂಘಟನೆಗಳು ಸೇರಿ ‘ಕೆಂಪು ಪುಸ್ತಕ ದಿನ’ವನ್ನು ಆಚರಿಸಲಾಗುತ್ತಿದೆ ಎಂದರು.
ಅಮೆರಿಕ ಹಲವು ಕ್ಷೇತ್ರಗಳಲ್ಲಿ ಕೊಡುಗೆ ಕೊಟ್ಟಿದೆ. ಆದರೆ ಅಲ್ಲಿರುವ ವಿದೇಶಾಂಗ ನೀತಿ ಮತ್ತು ಮಿಲಿಟರಿ ನೀತಿಗಳು ಸಂಪೂರ್ಣವಾಗಿ ಆ ದೇಶದ ಕಾರ್ಪೋರೇಟ್ ಕಂಪನಿಗಳ ವಿಪರೀತ ಲಾಭಕ್ಕಾಗಿ ಮಾತ್ರ ಎಂಬಂತಿದೆ. ಇದರಿಂದಾಗಿ, ಅಮೆರಿಕವನ್ನು ಪ್ರತಿರೋಧಿಸುವ ಜಗತ್ತಿನ ಇತರೆ ದೇಶಗಳ ಮೇಲೆ ತನ್ನ ಮಿಲಿಟರಿ ದಾಳಿಯನ್ನು ನಡೆಸಿ, ಆ ದೇಶದ ಆರ್ಥಿಕತೆಯನ್ನು ಸಂಪೂರ್ಣ ದಿವಾಳಿ ಎಬ್ಬಿಸುತ್ತಿದೆ ಎಂದರು.
ವೆನುಜುವೆಲಾದ ಅಧ್ಯಕ್ಷ ಮತ್ತು ಆತನ ಹೆಂಡತಿಯನ್ನು ಅಪಹರಿಸಿದಂತೆ, ಹಿಂದೆ ಸದ್ದಾಂ ಹುಸೇನನ್ನು ಕೊಂದಂತೆ ಮಾಡುತ್ತದೆ. ಪ್ರತಿ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಮೆರಿಕಕ್ಕೆ ಸವಾಲು ಹಾಕುವ ಶಕ್ತಿಯನ್ನು ಬೆಳೆಸಿಕೊಂಡಿರುವುದು ಚೀನಾ ಮಾತ್ರ. ಜಗತ್ತಿನ ಇತರೆ ಎಲ್ಲ ದೇಶಗಳು ಒಟ್ಟಾಗಿ ಅಮೆರಿಕದ ಈ ನೀತಿಗಳನ್ನು ಹಿಮ್ಮೆಟ್ಟಿಸಲು ಕ್ಯೂಬಾದಂತಹ ಸ್ವಾಭಿಮಾನದ ಹೋರಾಟವನ್ನು ಕಟ್ಟುವ ಅನಿವಾರ್ಯತೆ ಜಗತ್ತಿನ ಮುಂದಿದೆ ಎಂದು ಹೇಳಿದರು.
ಎನ್.ಕೆ. ವಸಂತ್ ರಾಜ್ ಅವರು ರಚಿಸಿರುವ ‘ಯು.ಎಸ್. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಪುಸ್ತಕದ ಕುರಿತು ಮಾತನಾಡಿದ ವಿದ್ಯಾರ್ಥಿ ಮುಖಂಡ ವಿವೇಕ್, ಅಮೆರಿಕ ಭಾರತದ ಜನತೆಯ ಶತ್ರು ಮಾತ್ರವಲ್ಲ, ಜಗತ್ತಿನ ಎಲ್ಲ ದುಡಿಯುವ ಜನರ ಶತ್ರುವಾಗಿ ಪರಿವರ್ತನೆಯಾಗುತ್ತಿದೆ. ಅದು ಸಾಮ್ರಾಜ್ಯಶಾಹಿಯಾಗಿ ಬೆಳೆದಿದೆ. ಎಲ್ಲ ದೇಶದ ದುಡಿಯುವ ಜನ, ಒಟ್ಟಾದರೆ ಮಾತ್ರ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ನಿರ್ಣಾಮಗೊಳಿಸಿ, ಎಲ್ಲರೂ ನೆಮ್ಮದಿಯಿಂದ ಬದುಕುವ ಸಮ ಸಮಾಜ ನಿರ್ಮಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್‌ಕುಮಾರ್ ಮಾತನಾಡಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೇಗೆ ಅಮೆರಿಕದ ಸಾಮ್ರಾಜ್ಯಶಾಹಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಬಂದು ನಿಂತಿದೆ ಮತ್ತು ಅದು ಮುಂದಿನ ದಿನಗಳಲ್ಲಿ ಮಾಡಬಹುದಾದ ಅಪಾಗಳ ಕುರಿತು ಎಚ್ಚರಿಸಬೇಕಿದೆ ಎಂದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯರ್ಶಿ ಎಂ.ಬಿ.ಪುಷ್ಟ ಉಪಸ್ಥಿತರಿದ್ದರು. ಆರ್.ಪಿ.ವೆಂಕಟೇಶಮೂರ್ತಿ, ಪರಮಶಿವಯ್ಯ, ಹುಲಿಕಲ್ ರಾಜಶೇಖರ್, ರೋಹಿತ್ ಹಗಸರಹಳ್ಳಿ, ಮಲ್ನಾಡ್ ಮೆಹಬೂಬ್, ಮಂಜು, ಅರವಿಂದ, ಪ್ರಕಾಶ್, ರಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.