ADVERTISEMENT

ಹಾಸನ | ಶ್ರಮದಾನದ ಫಲ: ಚಿಮ್ಮಿದ ಜೀವಜಲ

ಏಕಲವ್ಯ ರೋವರ್ಸ್‌ ಗ್ರೂಪ್‌ ಶಿಬಿರಾರ್ಥಿಗಳಿಂದ ಕಲ್ಯಾಣಿ, ಕಟ್ಟೆಗಳಿಗೆ ಪುನಶ್ಚೇತನ

ಕೆ.ಎಸ್.ಸುನಿಲ್
Published 21 ಮಾರ್ಚ್ 2021, 19:30 IST
Last Updated 21 ಮಾರ್ಚ್ 2021, 19:30 IST
ಯಲಗುಂದದಲ್ಲಿ ಕಲ್ಯಾಣಿ ಸ್ವಚ್ಛಗೊಳಿಸುತ್ತಿರುವ ಗಿರೀಶ್‌ ಮತ್ತು ತಂಡ.
ಯಲಗುಂದದಲ್ಲಿ ಕಲ್ಯಾಣಿ ಸ್ವಚ್ಛಗೊಳಿಸುತ್ತಿರುವ ಗಿರೀಶ್‌ ಮತ್ತು ತಂಡ.   

ಹಾಸನ: ಗಿಡ, ಗಂಟಿ ಹಾಗೂ ಹೂಳಿನಿಂದ ಹೂತು ಹೋಗಿದ್ದ ಕಟ್ಟೆ ಹಾಗೂ ಕಲ್ಯಾಣಿಗಳಿಗೆ ಪುನಶ್ಚೇತನ ನೀಡುವ ಕಾರ್ಯದಲ್ಲಿ ಹಾಸನದ ಏಕಲವ್ಯ ಮುಕ್ತದಳ ತಂಡದ ರೋವರ್‌ ಸ್ಕೌಟ್ಸ್‌ ಲೀಡರ್‌ ಆರ್‌.ಜಿ.ಗಿರೀಶ್‌ ತೊಡಗಿಸಿಕೊಂಡಿದ್ದಾರೆ. ಅದರ ಪರಿಣಾಮ ಈವರೆಗೆ ಜಿಲ್ಲೆಯ 87 ಕಲ್ಯಾಣಿ ಹಾಗೂ ಐದಾರು ಕಟ್ಟೆಗಳಿಗೆ ಪುನಶ್ಚೇತನ ಯೋಗ ದೊರೆತಿದೆ.

ಹಾಸನದಂತಹ ಅರೆಮಲೆನಾಡಿನಲ್ಲೂ ಮೂರು ವರ್ಷ ಸತತ ಬರ ಆವರಿಸಿತ್ತು. ಬೇಸಿಗೆಯಲ್ಲಿ ಕಡೇ ಪಕ್ಷ ಪ್ರಾಣಿ, ಪಕ್ಷಿಗಳಿಗಾಗುವಷ್ಟಾದರೂ ನೀರು ಸಿಗಲಿ ಎನ್ನುವ ಉದ್ದೇಶದಿಂದ ಪುರಾತನ ಕಲ್ಯಾಣಿಗಳ ಸ್ವಚ್ಛತೆಗೆ ಇಳಿದ ಗಿರೀಶ್ ಅವರ ತಂಡದ ಶ್ರಮಕ್ಕೆ ಫಲ ದೊರೆತಿದೆ. ಗಲೀಜು ತುಂಬಿದ ಕಲ್ಯಾಣಿಯನ್ನು ಶುಚಿಗೊಳಿಸಿದ ಎರಡೇ ದಿನದಲ್ಲಿ ಸಮೃದ್ಧ ಜಲ ಉಕ್ಕಿ ಬಂದಿರುವ ಉದಾಹರಣೆಯೂ ಇದೆ.

ಪುರಾತನ ಬಾವಿ, ಕಟ್ಟೆ, ಕಲ್ಯಾಣಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿರುವ ಇವರಿಗೆ ನಾನಾ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್‌, ಗೈಡ್ಸ್‌ ಶಿಬಿರಾರ್ಥಿಗಳು ಕೈ ಜೋಡಿಸಿದ್ದಾರೆ. ಕಲ್ಯಾಣಿಯಲ್ಲಿ ಹೇರಳವಾಗಿ ತುಂಬಿಕೊಂಡಿದ್ದ ಕಸ ಕಡ್ಡಿ, ಮಣ್ಣು ತೆರವುಗೊಳಿಸಿದ ಮೂರು ದಿನದಲ್ಲೇ ಸಾಕಷ್ಟು ನೀರು ಸಂಗ್ರಹ ಗೊಂಡಿದೆ.

ADVERTISEMENT

ಶುಚಿಗೊಳಿಸಿದ ಕಲ್ಯಾಣಿ ಮತ್ತು ಕಟ್ಟೆಗಳಲ್ಲಿ ಬೇಸಿಗೆಯಲೂ ತುಂಬಿರುವ ನೀರು, ಮಾಡಿದ ಕೆಲಸಕ್ಕೆ ಮಾದರಿಯಾಗಿದೆ. ಅವುಗಳ ಸುತ್ತಮುತ್ತಲ ಎರಡು, ಮೂರು ಕಿಲೋ ಮೀಟರ್ ವ್ಯಾಪ್ತಿಯ ಒಣಗಿ ನಿಂತಿದ್ದ ಕೊಳವೆ ಬಾವಿಗಳು ಪುನಶ್ಚೇತನಗೊಂಡಿವೆ. ನಿತ್ಯವೂ ಜಾನುವಾರುಗಳು ನೀರು ಕುಡಿಯುತ್ತಿವೆ. ವಿವಿಧ ಪಕ್ಷಿಗಳು ಸಂಸಾರ ಹೂಡಿವೆ. ಹೂಳೆತ್ತಿ ಪುನಶ್ಚೇತನಗೊಳಿಸಿದ ಅನೇಕ ಕಲ್ಯಾಣಿಗಳಲ್ಲಿ ಅಂತರ್ಜಲ ಉತ್ಪತ್ತಿಯಾಗಿ, ಮೇಲಿನ ನೀರೂ ಆರದೆ ಜೀವಜಲಕ್ಕೆ ಜೀವ ನೀಡುತ್ತಿದೆ.

ಸ್ಕೌಟ್ಸ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸ್ರಕ್ರಿಯರಾಗಿರುವ ಗಿರಿಶ್‌ ಅವರು 2016ರಲ್ಲಿ ಜಲಶೋಧನೆ ಆರಂಭಿಸಿದರು. ದೊಡ್ಡಗೇಣಿಗೆರೆ ಗ್ರಾಮದ ಅಂಧ ರವಿ ಎಂಬ ಸಾಮಾಜಿಕ ಕಾರ್ಯಕರ್ತ ತಮ್ಮ ಹಳ್ಳಿಯಲ್ಲಿ ಶ್ರಮದಾನ ಮಾಡುವಂತೆ ಗಿರೀಶ್‌ ಅವರ ತಂಡಕ್ಕೆ ಆಹ್ವಾನಿಸಿದರು. ಪರಿಶೀಲನೆಗೆಂದು ಗ್ರಾಮಕ್ಕೆ ಹೋದಾಗ ಪೂರಕ ಸ್ಪಂದನೆ ವ್ಯಕ್ತವಾಗಲಿಲ್ಲ. ಆದರೂ ಛಲ ಬಿಡದೆ ತಮ್ಮ ತಂಡದೊಂದಿಗೆ ಬಾವಿ ಸ್ವಚ್ಛತೆ ಆರಂಭಿಸಿದರು. ಹೂಳು, ಗಿಡ,ಗಂಟಿಗಳನ್ನು ಕಿತ್ತು ಹೊರ ಹಾಕಿದರು. ಸಂಜೆ ವೇಳೆಗೆ ನೀರು ಬರಲು ಆರಂಭಿಸಿತು.

ಈ ಯಶಸ್ಸಿನಿಂದ ಪ್ರೇರಣೆಗೊಂಡ ಗಿರೀಶ್‌ ಜಿಲ್ಲೆಯಲ್ಲಿ ಪುರಾತನ ಕಲ್ಯಾಣಿಗಳ ಸಮೀಕ್ಷೆ ನಡೆಸಿದರು. ಸುಮಾರು 250ಕ್ಕೂ ಹೆಚ್ಚು ಮುಚ್ಚಿ ಹೋಗಿರುವ ಕಲ್ಯಾಣಿಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ಶ್ರಮದಾನ ಆರಂಭಿಸಿದರು. ಈವರೆಗೆ 87 ಕಲ್ಯಾಣಿ ಹಾಗೂ ಹಲವು ಕಟ್ಟೆಗಳಿಗೆ ಕಾಯಕಲ್ಪ ನೀಡಲಾಗಿದೆ.

ಹಾಸನ ಅಲ್ಲದೇ ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಶ್ರಮದಾನ ಮೂಲಕ ಕಲ್ಯಾಣಿ, ಕಟ್ಟೆಗಳಿಗೆ ಕಾಯಕಲ್ಪ ನೀಡಿದ್ದಾರೆ. ಶ್ರಮದಾನಕ್ಕೆ ಹೋಗುವಾಗ ತಮ್ಮೊಂದಿಗೆ ಅಕ್ಕಿ, ಬೇಳೆ ಕೊಂಡೊಯ್ದು ತಾವೇ ಆಹಾರ ತಯಾರಿಸಿಕೊಳ್ಳುತ್ತಾರೆ. ಕೆಲಸಕ್ಕೆ ಬೇಕಾಗುವ ಬುಟ್ಟಿ. ಗುದ್ದಲಿ, ಹಾರೆ, ಬಾಂಡಲಿ ಸೇರಿ ವಿವಿಧ ಸಲಕರಣೆಗಳನ್ನು ಅವರೇ ತೆಗೆದುಕೊಂಡು ಹೋಗುತ್ತಾರೆ. ಹಲವು ಬಾರಿ ಸಾರಿಗೆ ಮತ್ತು ಊಟದ ವೆಚ್ಚವನ್ನು ಅವರೇ ಭರಿಸಿದ್ದಾರೆ. ತಮಗಿರುವ ಅಲ್ಪ ಆದಾಯದಲ್ಲಿಯೇ ಈ ಕೆಲಸ ಮಾಡುತ್ತಿದ್ದಾರೆ.

ಹಾಸನ ಸುತ್ತಲಿನ ಕೆರೆಕಟ್ಟೆಗಳಲ್ಲಿ ಶ್ರಮದಾನ ಕೈಗೊಳ್ಳುವ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿರುವ ಆರ್.ಜಿ.ಗಿರೀಶ್‌ ಅವರನ್ನು ಅರಸೀಕರೆ ತಾಲ್ಲೂಕು ನ್ಯಾಯಾಧೀಶೆ ನಿರ್ಮಲಾ ಅವರು ಸಂಪರ್ಕಿಸಿ ಬಾಣಾವರದಲ್ಲಿ ಜಲ ಸಂರಕ್ಷಣಾ ಕಾರ್ಯ ಹಮ್ಮಿಕೊಳ್ಳುವಂತೆ ಮನವಿ ಮಾಡಿದ್ದರು. ಅವರ ಮನವಿಯಂತೆ ಪುರಾತನ ಕಲ್ಯಾಣಿ ಅರಸಿನಬಾವಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಕೈಗೊಂಡರು. ಸುತ್ತಲಿನ ಗಿಡ ತೆರವುಗೊಳಿಸಿ, ಹೂಳೆತ್ತುವ ಕೆಲಸ ಕೈಗೊಂಡ ಎರಡು ದಿನದಲ್ಲೇ ಅಂತರ್ಜಲ ಆರು ಅಡಿಯಷ್ಟು ನೀರು ತುಂಬಿಕೊಂಡಿತು.

ಗಿರೀಶ್‌ ಮತ್ತು ತಂಡದವರ ಕೆಲಸದಿಂದ ಪ್ರೇರಪಣೆಗೊಂಡು ಹಸಿರು ಭೂಮಿ ಪ್ರತಿಷ್ಠಾನ ಸೇರಿದಂತೆ ಹಲವು ಸಂಘಟನೆಗಳು ಜಲಮೂಲ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಹಸಿರು ಭೂಮಿ ಪ್ರತಿಷ್ಠಾನವು ಜಿಲ್ಲೆಯಲ್ಲಿ ಈವರೆಗೆ 60ಕ್ಕೂ ಹೆಚ್ಚು ಕಲ್ಯಾಣಿ ಹಾಗೂ ಹದಿನಾರು ಕೆರೆಗಳಿಗೆ ಪುನಶ್ಚೇತನ ನೀಡಿದೆ.ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.