ADVERTISEMENT

ಹಾಸನ | ಧರ್ಮದ ಹೆಸರಲ್ಲಿ ಕೋಮುಗಲಭೆ: ಆರೋಪ

ಆರ್‌ಎಸ್‌ಎಸ್ ಕುತಂತ್ರಕ್ಕೆ ದಲಿತ ಸಂಘರ್ಷ ಸಮಿತಿ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:47 IST
Last Updated 11 ನವೆಂಬರ್ 2025, 1:47 IST
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.    

ಹಾಸನ: ಧರ್ಮದ ಆಧಾರದಲ್ಲಿ ಆರ್‌ಎಸ್‌ಎಸ್‌ ಕೋಮುಗಲಭೆ ಸೃಷ್ಟಿಸುವ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು‌.

ಜಿಲ್ಲಾ ಘಟಕದ ಸಂಚಾಲಕ ದುಮ್ಮಿ ಕೃಷ್ಣ ಮಾತನಾಡಿ, ಆರ್‌ಎಸ್‌ಎಸ್ ಹಾಗೂ ಅದರ ಅಂಗಸಂಸ್ಥೆಗಳು, ದೇಶದ ಸಾಮಾಜಿಕ ಏಕತೆಯನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.

ಇಂತಹ ಸಂಘಟನೆ ವಿರುದ್ಧ ಪ್ರಬುದ್ಧ ಸಂಘಟನೆಗಳು ಹಾಗೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೊನೆಯ ದಿನಗಳಲ್ಲಿ ಎಚ್ಚರಿಸಿದ್ದ ಧರ್ಮದ ಹೆಸರಿನಲ್ಲಿ ಹಗೆ ಹುಟ್ಟಿಸುವ ಶಕ್ತಿಗಳು ಭಾರತದ ಆತ್ಮವನ್ನು ಕೊಲ್ಲುತ್ತವೆ ಎಂಬ ಮಾತಿಗೆ ಆರ್‌ಎಸ್‌ಎಸ್‌ ಚಟುವಟಿಕೆಗಳು ಪುಷ್ಠಿ ನೀಡುತ್ತಿದೆ ಎಂದರು.

ADVERTISEMENT

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದಶಕಗಳ ಹಿಂದೆಯೇ ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಮಹಾಸಭೆಯಂತಹ ಸಂಘಟನೆಗಳ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದರು. ಅವರು ಈ ಸಂಘಟನೆಗಳು ಸಂವಿಧಾನದ ವಿರುದ್ಧವಾಗಿದ್ದು, ಮನುವಾದಿ ಚಿಂತನೆಯ ಮೂಲಕ ಶೋಷಿತ ವರ್ಗದ ಹಕ್ಕುಗಳನ್ನು ಹಿಂಸಿಸುವ ಅಪಾಯವಿರುವುದಾಗಿ ಹೇಳಿದ್ದರು ಎಂದರು. 

ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆ ರಾಷ್ಟ್ರದಾದ್ಯಂತ ಆಕ್ರೋಶ ಹುಟ್ಟಿಸಿದೆ. ಸನಾತನ ಧರ್ಮ ಉಳಿಸಲು ಶೂ ಎಸೆದಿದ್ದೇನೆ ಎಂದು ಆತ ಹೇಳಿರುವುದು ಕೇವಲ ವೈಯಕ್ತಿಕ ಹಗೆ ಅಲ್ಲ, ಅದು ಸಂವಿಧಾನದ ತತ್ವಗಳ ಮೇಲಿನ ಹಲ್ಲೆಯಾಗಿದೆ ಎಂದು ದೂರಿದರು.

ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಿ, ಜೀವಾವಧಿ ಶಿಕ್ಷೆ ವಿಧಿಸಬೇಕು. ಚಿತ್ತಾಪುರದಲ್ಲಿ ಅನುಮತಿ ಇಲ್ಲದೇ ಪಥಸಂಚಲನ ನಡೆಸಿದ ಆರ್‌ಎಸ್‌ಎಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ದಲಿತ ಸಮಿತಿ ರಾಜ್ಯ ಸಂಚಾಲಕ ಈರೇಶ್ ಹಿರೇಹಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ಮೇಲ್ ರಾಜ್, ಮಹಿಳಾ ಒಕ್ಕೂಟದ ಕಮಲಮ್ಮ, ತಾಲ್ಲೂಕು ಸಂಘಟನಾ ಸಂಚಾಲಕ ಶಿವಸ್ವಾಮಿ ಬೈಲಹಳ್ಳಿ, ಮಂಜಯ್ಯ ಯಾಚನಗುಪ್ಪೆ, ಸದಸ್ಯ ರವಿ ಮಾಗೋಡು ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.