ADVERTISEMENT

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

ಕೋರ್ಟ್ ಕಲಾಪದಿಂದ ಹೊರಗುಳಿದು ಡಿಸಿ ಕಚೇರಿ ಬಳಿ ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 14:00 IST
Last Updated 3 ಮಾರ್ಚ್ 2021, 14:00 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರು ಪ್ರತಿಭಟನೆ ನಡೆಸಿದರು.   

ಹಾಸನ: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೋರ್ಟ್ ಕಲಾಪಗಳಿಂದ ಹೊರಗುಳಿದುನಗರದ ಹೇಮಾವತಿ ಪ್ರತಿಮೆ ಬಳಿಯಿಂದ ನೂರಾರು ವಕೀಲರು ಮೆರವಣಿಗೆಯಲ್ಲಿ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಶೇಖರ್‌ ಮಾತನಾಡಿ, ‘ದೇಶದಲ್ಲಿ ದಿನದಿಂದ ದಿನಕ್ಕೆ ವಕೀಲರ ಮೇಲೆ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತಿದ್ಧೇವೆ. ಆದರೆ ಸಮಾಜಘಾತುಕ ವ್ಯಕ್ತಿಗಳು ವಕೀಲರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ತೆಲಂಗಾಣ ಹಾಗೂ ಹೊಸಪೇಟೆಯಲ್ಲಿ ವಕೀಲರ ಸಂಘದ ಆವರಣದಲ್ಲಿಯೇ ವಕೀಲರನ್ನು ಹತ್ಯೆ ಮಾಡಲಾಗಿದೆ. ಇದು ಖಂಡನೀಯ’ ಎಂದರು.

ADVERTISEMENT

‘ಸರ್ಕಾರಿ ನೌಕರರಿಗೆ ತೊಂದರೆಯಾದರೆ ಅವರ ರಕ್ಷಣೆಗೆ ಕಾಯ್ದೆ ಇದೆ. ಆದರೆ, ಸಾರ್ವಜನಿಕರ ಹಿತಕ್ಕಾಗಿ ಕೆಲಸ ಮಾಡುವ ವಕೀಲರ ಮೇಲೆ ಪದೇ ಪದೇ ಹಲ್ಲೆಯಾಗುತ್ತಿದೆ. ಸರ್ಕಾರದಿಂದ ವಕೀಲರಿಗೆ ರಕ್ಷಣೆ ಕೊಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು
ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ವಕೀಲರಾದ ಕಾರ್ಲೆ ಮೊಗಣ್ಣಗೌಡ, ಎನ್‌.ಎಸ್‌. ಗೋಪಾಲ್‌, ಪೂರ್ಣಚಂದ್ರ, ಚನ್ನಂಗಿಹಳ್ಳಿ
ಶ್ರೀಕಾಂತ್‌, ತಾರಾ ಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.