ADVERTISEMENT

ಹೆಚ್ಚುವರಿ ಬಸ್ ನೀಡುವಂತೆ ಮನವಿ: ಶಾಸಕ ಸಿ.ಎನ್. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 12:48 IST
Last Updated 29 ಜನವರಿ 2025, 12:48 IST
ಹಿರೀಸಾವೆ ಹೋಬಳಿಯ ಸಬ್ಬನಹಳ್ಳಿಯಲ್ಲಿ ದಾದಿಯರ ಉಪ ಕೇಂದ್ರ ನಿರ್ಮಾಣಕ್ಕೆ ಶಾಸಕ ಬಾಲಕೃಷ್ಣ ಬುಧವಾರ ಭೂಮಿಪೂಜೆ ನೆರವೇರಿಸಿದರು. ರಾಮಕೃಷ್ಣ, ಮಂಜುನಾಥ್, ಪುಟ್ಟಸ್ವಾಮಿಗೌಡ ಪಾಲ್ಗೊಂಡಿದ್ದರು
ಹಿರೀಸಾವೆ ಹೋಬಳಿಯ ಸಬ್ಬನಹಳ್ಳಿಯಲ್ಲಿ ದಾದಿಯರ ಉಪ ಕೇಂದ್ರ ನಿರ್ಮಾಣಕ್ಕೆ ಶಾಸಕ ಬಾಲಕೃಷ್ಣ ಬುಧವಾರ ಭೂಮಿಪೂಜೆ ನೆರವೇರಿಸಿದರು. ರಾಮಕೃಷ್ಣ, ಮಂಜುನಾಥ್, ಪುಟ್ಟಸ್ವಾಮಿಗೌಡ ಪಾಲ್ಗೊಂಡಿದ್ದರು   

ಹಿರೀಸಾವೆ: ಚನ್ನರಾಯಪಟ್ಟಣ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಹೆಚ್ಚುವರಿಯಾಗಿ 10 ಬಸ್‌ಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಹೇಳಿದರು.

ಹೋಬಳಿಯ ಸಬ್ಬನಹಳ್ಳಿ ಗ್ರಾಮದಲ್ಲಿ ₹65 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಾದಿಯರ ಉಪ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಈ ಗ್ರಾಮ ಸೇರಿ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಮನವಿ ಗ್ರಾಮಸ್ಥರು ಮನವಿ ಮಾಡಿದ್ದು, ಸಾರಿಗೆ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್ ಗಳು ಬಂದ ಬಳಿಕ ಚನ್ನರಾಯಪಟ್ಟಣ, ಹಿರೀಸಾವೆ, ಅರಕೆರೆ, ಸಬ್ಬನಹಳ್ಳಿ, ಆಯರಹಳ್ಳಿ, ಕಮರವಳ್ಳಿ ಮಾರ್ಗದ ಸಮೀಕ್ಷೆ ನಡೆಸಿ, ಬಸ್ ಸಂಚಾರ ಪ್ರಾರಂಭಿಸಲಾಗುವುದು. ಇದಕ್ಕೆ 3 ತಿಂಗಳು ಕಾಲಾವಕಾಶ ಬೇಕು’ ಎಂದರು.

ADVERTISEMENT

‘ಆರೋಗ್ಯ ಕಟುಂಬ ಕಲ್ಯಾಣ ಇಲಾಖೆಯಿಂದ ಶ್ರವಣಬೆಳಗೊಳ ಕ್ಷೇತ್ರದ ಸಬ್ಬನಹಳ್ಳಿ ಮತ್ತು ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಈ ದಾದಿಯರ ಉಪಕೇಂದ್ರ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಈ ಕೇಂದ್ರದಿಂದ ಗಡಿ ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಹಕಾರಿ ಆಗುತ್ತದೆ’ ಎಂದು ಶಾಸಕರು ಹೇಳಿದರು.

ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ, ಶುದ್ಧ ಕುಡಿಯುವ ನೀರಿನ ಘಟಕ, ದೇವಸ್ಥಾನಕ್ಕೆ ಹೋಗುವ ಮಾರ್ಗದ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ಹೋಬಳಿಯ ಜೆಡಿಎಸ್ ಮುಖಂಡ ಎಚ್.ಜಿ. ರಾಮಕೃಷ್ಣ, ಆರೋಗ್ಯ ಇಲಾಖೆಯ ಎಇಇ ರಶ್ಮಿ, ಎಇ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಪ್ರಭಾಕರ್, ಗ್ರಾಮದ ಪುಟ್ಟಸ್ವಾಮಿಗೌಡ, ರಮೇಶ್, ಗಂಗಾಧರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.