ಬೇಲೂರಿನ ಬಸವೇಶ್ವರ ವೃತ್ತದಲ್ಲಿ ಶನಿವಾರ ‘ನಾಗಮೋಹನ್ ದಾಸ್ ಆಯೋಗದ ಪರಿಶಿಷ್ಟಜಾತಿ ಒಳಮಿಸಲಾತಿ 2025 ವರದಿ’ಯನ್ನು ಮರುಪಶೀಲಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿ ಛಲವಾದಿ ಮಹಸಭಾ ತಾಲ್ಲೂಕು ಘಟಕ ಹಾಗೂ ದಲಿತಪರ ಸಂಘಟನೆಗಳ ಮಹಾ ಒಕ್ಕೂಟದ ಕಾರ್ಯಕರ್ತರು ಪ್ರತಿಭಟಿಸಲಾಯಿತು.
ಬೇಲೂರು: ‘ನಾಗಮೋಹನ್ ದಾಸ್ ಆಯೋಗದ ಪರಿಶಿಷ್ಟಜಾತಿ ಒಳಮಿಸಲಾತಿ-2025ರ ವರದಿ’ಯನ್ನು ಮರು ಪರಿಶೀಲಿಸಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿ ಛಲವಾದಿ ಮಹಸಭಾ ತಾಲ್ಲೂಕು ಘಟಕ ಹಾಗೂ ದಲಿತ ಪರ ಸಂಘಟನೆಗಳ ಮಹಾ ಒಕ್ಕೂಟದಿಂದ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟಿಸಲಾಯಿತು.
ಛಲವಾದಿ ಸಮುದಾಯದ ಮುಖಂಡ, ಪುರಸಭೆ ಸದಸ್ಯ ಸಿ.ಎನ್. ದಾನಿ ಮಾತನಾಡಿ, ‘ಪರಿಶಿಷ್ಟಜಾತಿಯ ಬಲಗೈ ಸಮುದಾಯಕ್ಕೆ ದುರುದ್ದೇಶದಿಂದ ಅನ್ಯಾಯವೆಸಗಿ, ಶೋಷಿಸಲಾಗುತ್ತಿದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ. ನಾವು ಸುಮ್ಮನಿರುವುದಿಲ್ಲ. ಈ ಸಮೀಕ್ಷೆಯಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿವೆ. ಉಪ ಸಮಿತಿ ರಚಿಸಿ ಸಮೀಕ್ಷೆಯನ್ನು ಮರು ಪರೀಲನೆ ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯ ದೊರೆಕಿಸಿಕೊಡಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪ್ತಿ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.
ಛಲವಾದಿ ಮಹಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಸಮೀಕ್ಷೆಯಲ್ಲಿ ತಾರತಮ್ಯ ಮಾಡಲಾಗಿದೆ. ರಾಜ್ಯದಲ್ಲಿ ಚಲವಾದಿ ಸಮುದಾಯ ಜಾಸ್ತಿ ಇದ್ದರೂ ಒಳಮಿಸಲಾತಿ ಪ್ರಮಾಣದಲ್ಲಿ ಛಲವಾದಿ ಸಮುದಯಕ್ಕೆ ದ್ರೋಹವಾಗಿದೆ. ಮುಖ್ಯಮಂತ್ರಿ ಮರು ಪರಿಶೀಲನೆ ನಡೆಸಿ, ನಮ್ಮ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ, ಸಮಾಜಿಕ ಭದ್ರತೆಗೆ ಸಹಾಕರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದಲ್ಲಿರುವ ಛಲವಾದಿ ಸಮುದಾಯದ ಸಚಿವರು ನಿದ್ದೆಯಿಂದ ಎದ್ದು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಬಿಎಸ್‌ಪಿ ಯೋಗೀಶ್, ಬಸವರಾಜು, ರಾಯಪುರ ರವಿ, ಕೌರಿ ಕುಮಾರ್, ಸತೀಶ್, ಗಂಗರಾಜು, ಶೆಟ್ಟಿಗೆರೆ ರಘು, ಕೊಡಿಹಳ್ಳಿ ನವೀನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.