ADVERTISEMENT

ನವೆಂಬರ್‌ಗೆ ಸಮಾವೇಶ ನಡೆಸಲು ನಿರ್ಣಯ

ಒಳಮೀಸಲಾತಿ ಒಡಲಾಳ ಪೂರ್ವಭಾವಿ ಚಿಂತನಾ ಸಭೆಯಲ್ಲಿ ಮುಖಂಡರ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 12:56 IST
Last Updated 27 ಸೆಪ್ಟೆಂಬರ್ 2020, 12:56 IST
ಹಾಸನದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಕರೆದಿದ್ದ ‘ಒಳ ಮೀಸಲಾತಿ ಒಡಲಾಳ ಪೂರ್ವಭಾವಿ ಚಿಂತನಾ ಸಭೆ’ಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು.
ಹಾಸನದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಕರೆದಿದ್ದ ‘ಒಳ ಮೀಸಲಾತಿ ಒಡಲಾಳ ಪೂರ್ವಭಾವಿ ಚಿಂತನಾ ಸಭೆ’ಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು.   

ಹಾಸನ: ಒಳ ಮೀಸಲಾತಿ ಅನುಷ್ಠಾನ ಕುರಿತು ನ್ಯಾ. ಎ.ಜೆ.ಸದಾಶಿವ ಮೂರ್ತಿ ಆಯೋಗ ನೀಡಿರುವ ವರದಿ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ನವೆಂಬರ್‌ ತಿಂಗಳಲ್ಲಿ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸಮಾವೇಶ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು.

ನಗರ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಒಳ ಮೀಸಲಾತಿ ಒಡಲಾಳ ಪೂರ್ವಭಾವಿ ಚಿಂತನಾ ಸಭೆ’ಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಚರ್ಚಿಸಿ ಈ ತೀರ್ಮಾನ ಕೈಗೊಂಡರು.

ರಾಜಕಾರಣಿಗಳಿಗೂ ಒಳಮೀಸಲಾತಿ ಕುರಿತು ಅರ್ಥ ಮಾಡಿಸಬೇಕಿರುವುದರಿಂದ ಅವರನ್ನೂ ಆಹ್ವಾನಿಸಬೇಕು.ಜತೆಗೆ ಚಿಂತಕರು, ಸಾಹಿತಿಗಳಿಗೂ ಆಹ್ವಾನ ನೀಡಲು ನಿರ್ಧರಿಸಲಾಯಿತು.

ADVERTISEMENT

ಕಲಾವಿದ ಕೆ.ಟಿ. ಶಿವಪ್ರಸಾದ್‌ ಮಾತನಾಡಿ, ‘ಜನಪ್ರತಿನಿಧಿಗಳು ತಮ್ಮ ಕರ್ತವ್ಯ ಮರೆತಿದ್ದಾರೆ. ಹಣ ಮಾಡುವುದೇ ಅವರ ಮುಖ್ಯ ಉದ್ದೇಶವಾಗಿದೆ. ಒಳಮೀಸಲಾತಿ ಕುರಿತು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಈ ಬಗ್ಗೆ ಗಮನ ನೀಡಿಲ್ಲ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಕುಳಿತು ಚರ್ಚಿಸಿ ಮುಂದಿನ ನಡೆ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಬೇಕು’ಎಂದು ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ನಾರಾಯಣದಾಸ್‌ ಮಾತನಾಡಿ, ‘ದೇಶದ ಜನಸಂಖ್ಯೆಯ ಶೇಕಡಾ 3 ರಷ್ಟಿರುವ ಬ್ರಾಹ್ಮಣರಿಗೆ ಶೇಕಡಾ 40 ರಷ್ಟು ಮೀಸಲಾತಿ ನೀಡಲಾಗಿದೆ. ಉಳಿದ ಎಲ್ಲಾ ಜಾತಿಗಳಿಗೆ ಶೇಕಡಾ 60 ರಷ್ಟು ನೀಡಲಾಗಿದೆ. ನರೇಂದ್ರ ಮೋದಿ ಹೆಸರಿಗಷ್ಟೇ ಪ್ರಧಾನ ಮಂತ್ರಿ. ದೇಶದ ಎಲ್ಲಾ ನಿರ್ಣಯನಾಗಪುರದಲ್ಲಿ ಕೈಗೊಳ್ಳಲಾಗುತ್ತದೆ. ಜನಪ್ರತಿನಿಧಿಗಳು ವಿಧಾನ ಸಭೆ ಮತ್ತು ವಿಧಾನ ಪರಿಷನ್‌ನಲ್ಲಿಮೀಸಲಾತಿ ಕುರಿತು ಮಾತನಾಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌ ಮಾತನಾಡಿ, ‘ರಾಜ್ಯ ಹಾಗೂ ರಾಷ್ಟ್ರದಲ್ಲಿಬಿಜೆಪಿಯವರು ಚುನಾವಣೆ ಪೂರ್ವದಲ್ಲಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಹೇಳಿ ಮತಪಡೆದು ಅಧಿಕಾರಕ್ಕೆ ಬಂದರು. ಆದರೆ, ವಿಧಾನಸಭೆ ಅಧಿವೇಶನ ಮುಗಿದರೂ ಈ ಬಗ್ಗೆ ಚರ್ಚಿಸಲಿಲ್ಲ. ತಮಿಳುನಾಡು ರಾಜ್ಯದಲ್ಲಿ ಶೇಕಡಾ 75ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದೇ ಮಾದರಿ ರಾಜ್ಯದಲ್ಲಿಯೂ ಜಾರಿಗೆ ತರಬೇಕು. ದೇಶದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಎಚ್‌.ಕೆ. ಸಂದೇಶ್‌, ಕೆ. ಈರಪ್ಪ, ಅಂಬುಗ ಮಲ್ಲೇಶ್‌, ಛಲವಾದಿ ಪುಟ್ಟರಾಜು, ಹಲಿತ ಹಕ್ಕುಗಳ ಸಮಿತಿ ಸಂಚಾಲಕ ಎಂ.ಜಿ. ಪೃಥ್ವಿ, ಆರ್‌.ಪಿ.ಐ ನ ಮುಖಂಡ ಸತೀಶ್‌, ಕೃಷ್ಣದಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.