ADVERTISEMENT

ಹಾಸನ: ಮುಚ್ಚಿದ್ದ ಎರಡು ಶಾಲೆಗಳ ಪುನಃ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 9:59 IST
Last Updated 2 ಜೂನ್ 2019, 9:59 IST
ಅರಕಲಗೂಡು ತಾಲ್ಲೂಕು ಕುಟಕಮಟ್ಟಿ ಕಾವಲ್‌ನಲ್ಲಿ ಹೊಸದಾಗಿ ಆರಂಭಗೊಂಡಿರುವ ಶಾಲೆ
ಅರಕಲಗೂಡು ತಾಲ್ಲೂಕು ಕುಟಕಮಟ್ಟಿ ಕಾವಲ್‌ನಲ್ಲಿ ಹೊಸದಾಗಿ ಆರಂಭಗೊಂಡಿರುವ ಶಾಲೆ   

ಅರಕಲಗೂಡು: ತಾಲ್ಲೂಕಿನಲ್ಲಿ ಮುಚ್ಚಲ್ಪಟ್ಟಿದ್ದ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪುನಃ ಆರಂಭಿಸಲಾಗಿದೆ. ಇದರೊಂದಿಗೆ ನೂತನವಾಗಿ ಒಂದು ಶಾಲೆಯನ್ನು ತೆರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವನಂಜೇಗೌಡ ತಿಳಿಸಿದರು.

ತಾಲ್ಲೂಕಿನ ಸಿದ್ದಾಪುರ ಗೇಟ್ ಹಾಗೂ ಅರಗಲ್ ಗ್ರಾಮಗಳಲ್ಲಿದ್ದ ಪ್ರಾಥಮಿಕ ಶಾಲೆಗಳು ಅಗತ್ಯ ಮಕ್ಕಳ ಸಂಖ್ಯೆಯಿಲ್ಲದೇ ಹಾಗೂ ಶಿಕ್ಷಕರ ಕೊರತೆಯಿಂದಾಗಿ ಮೂರು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಈ ಎರಡೂ ಗ್ರಾಮಗಳ ಜನತೆ ತಮ್ಮ ಗ್ರಾಮಗಳಲ್ಲಿ ಶಾಲೆಯನ್ನು ಪುನರಾರಂಭಿಸುವಂತೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಶಾಲೆಯನ್ನು ಮತ್ತೆ ಆರಂಭಿಸಲಾಗಿದೆ. ಎರಡೂ ಶಾಲೆಗಳಲ್ಲಿ ತಲಾ 12 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಗ್ರಾಮದಲ್ಲಿ ಶಾಲೆ ಮತ್ತೆ ಆರಂಭಗೊಂಡಿರುವುದು ಗ್ರಾಮಸ್ಥರಿಗೂ ಸಂತಸ ತಂದಿದ್ದು ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾಗಿದ್ದಾರೆ ಎಂದರು.

ಇದಲ್ಲದೆ ಕುಟುಕಮಟ್ಟಿ ಕಾವಲ್ ಗ್ರಾಮದಲ್ಲಿ ಈ ವರ್ಷ ಹೊಸದಾಗಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ. ಇಲ್ಲಿ ಶಾಲೆ ತೆರೆಯುವಂತೆ ಬಹುದಿನಗಳಿಂದ ಒತ್ತಾಯ ಇತ್ತು. ಶಾಲೆಗೆ 22 ಜನ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಯಾಗಿದ್ದಾರೆ. ಗ್ರಾಮಸ್ಥರು ಶಾಲೆ ನಡೆಸಲು ಹಾಗೂ ಬಿಸಿಯೂಟ ತಯಾರಿಸಲು ಕೊಠಡಿಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸಮೀಪದ ಬೋಳಕ್ಯಾತನಹಳ್ಳಿ ಗ್ರಾಮದಲ್ಲಿ ಮುಚ್ಚಿದ್ದ ಶಾಲೆಯ ವಸ್ತುಗಳನ್ನು ಇಲ್ಲಿಗೆ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗಿದೆ ಹಾಗೂ ಅಗತ್ಯ ಶಿಕ್ಷಕರನ್ನು ನೇಮಕ ಮಾಡಲಾಗಿದೆಎಂದು ಹೇಳಿದರು.

ADVERTISEMENT

‘ಮುಂದಿನ ದಿನಗಳಲ್ಲಿ ಶಾಲೆಗೆ ನೂತನ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಾಗೂ ಪೋಷಕರ ಗಮನ ಸೆಳೆದು ಸರ್ಕಾರಿ ಶಾಲೆಗಳ ಕುರಿತು ಅರಿವು ಮೂಡಿಸಲು ಈ ಮೂರು ಶಾಲೆಗಳಲ್ಲಿ ಸದ್ಯದಲ್ಲೇ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.