ADVERTISEMENT

ಲಾಕ್‌ಡೌನ್‌ ಇನ್ನಷ್ಟು ಬಿಗಿ ಮಾಡಿ: ಶಾಸಕ ಎಚ್‌.ಡಿ.ರೇವಣ್ಣ

ಜಿಲ್ಲಾಡಳಿತಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಮೇ 2020, 13:19 IST
Last Updated 12 ಮೇ 2020, 13:19 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಜಿಲ್ಲೆಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಸಾಕಷ್ಟು ಜನರು ಬರುತ್ತಿದ್ದು, ಕೋವಿಡ್‌ -19 ಜಿಲ್ಲೆಯ ಜನರಿಗೆ ಹರಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ಮೊದಲಿನಂತೆಯೇ ವಾರದ ಮೂರು ದಿನ, ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಮಾತ್ರವೇ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು. ಸಾರ್ವಜನಿಕರು ಗುಂಪು ಗುಂಪಾಗಿ ಓಡಾಡುವುದು, ಅಂತರ ಪಾಲನೆ ಮಾಡದಿರುವುದನ್ನು ತಡೆಯಬೇಕು. ಹೊರ ಜಿಲ್ಲೆಯಿಂದ ಬರುವವರಿಗೆ ಯಾವುದೇ ಕಾರಣಕ್ಕೂ ಒಳಗೆ ಬಿಡಬಾರದು. ಅವರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಜಿಲ್ಲಾಧಿಕಾರಿ ಈ ಕೂಡಲೇ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದು, ಲಾಕ್‌ಡೌನ್‌ ಮುಂದುವರಿಸುವುದರಸಾಧಕ ಬಾಧಕಗಳಕುರಿತು ಚರ್ಚಿಸಿ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಬೇಕು. ಇನ್ನೂ ಕನಿಷ್ಠ 8 ರಿಂದ 10 ದಿನ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಹೊಳೆನರಸೀಪುರದಲ್ಲಿ ನಾನು ಅಧಿಕಾರಿಗಳ ಸಭೆ ಕರೆದು ವಾರದ ಮೂರು ದಿನ ಮಾತ್ರವೇ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಿದ್ದೇನೆ. ಇದನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೂ ತರುತ್ತೇನೆ’ ಎಂದರು.

ADVERTISEMENT

ಇತರೆ ವರ್ಗದವರನ್ನೂ ಸೇರಿಸಿ: ರಾಜ್ಯ ಸರ್ಕಾರ ಲಾಕ್‌ಡೌನ್‌ ವೇಳೆಯಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಉದ್ದೇಶದಿಂದ ₹ 1,610 ಕೋಟಿ ಆರ್ಥಿಕ ನೆರವು ಘೋಷಣೆ ಮಾಡಿದೆ. ಎರಡನೇ ಹಂತದಲ್ಲಿಯೂ ಇತರೇ ಅಸಂಘಟಿತ ವರ್ಗಕ್ಕೂ ಆದ್ಯತೆನೀಡಬೇಕು. ಬೀದಿ ಬದಿ ವ್ಯಾಪಾರಿಗಳು, ಅರ್ಚಕರು, ಚಿನ್ನ ಬೆಳ್ಳಿ ಕುಶಲಕರ್ಮಿಗಳು, ಪಾನಿಪುರಿ ವ್ಯಾಪಾರಿಗಳು, ಫಾಸ್ಟ್ ಫುಡ್‌ ಮಾರಾಟ ಮಾಡುವವರು, ಮರಗೆಲಸ ಮಾಡುವವರು, ಹಮಾಲಿಗಳನ್ನೂ ಪರಿಗಣಿಸಬೇಕು. ಇವರಿಗೆ ಕನಿಷ್ಠ ₹ 5 ರಿಂದ 10 ಸಾವಿರ ಸಹಾಯ ಧನ ನೀಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಬಿಡುಗಡೆ ಮಾಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡಬೇಕು. ದಾಖಲೆಗಳಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸಿಕೊಂಡು ಅರ್ಹರಿಗೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.