
ಹಾಸನ: ಎಚ್.ಡಿ. ರೇವಣ್ಣ ಅವರು ಅಧಿಕಾರದಲ್ಲಿದ್ದಾಗ ಯಾವ ಸಮಾವೇಶ ಹೇಗೆ ಮಾಡಿದ್ದಾರೆ ಎಂಬುದು ಅವರಿಗೆ ತಿಳಿದಿದೆ. ರೇವಣ್ಣ ಚಿಲ್ಲರೆ ವ್ಯಕ್ತಿಯಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಪೊಳ್ಳು ಆರೋಪ ಮಾಡುವುದನ್ನು ಕಲಿತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಡಿ.6 ರಂದು ನಡೆಯುವ ಸರ್ಕಾರಿ ಸೌಲಭ್ಯಗಳ ಸಮರ್ಪಣಾ ಸಮಾವೇಶಕ್ಕೆ ಸರ್ಕಾರಿ ಇಲಾಖೆಗಳಿಂದ ಹಣ ವಸೂಲಿ ಮಾಡಲಾಗಿದೆ ಎಂದು ರೇವಣ್ಣ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ರೇವಣ್ಣ ಮೊದಲು ಚೆನ್ನಾಗಿದ್ದರು. ಈಗ ಪೊಳ್ಳು ಹೇಳಿಕೆ ನೀಡುವುದನ್ನು ಕಲಿತಿದ್ದಾರೆ. ಹುಡಾದಲ್ಲಿ ₹ 1 ಕೋಟಿ ವಸೂಲಿ ಮಾಡಲು ಸಾಧ್ಯವಿದೆಯೇ? ಈ ರೀತಿಯ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ ಎಂದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೇವಣ್ಣ ಕೂಡ ಸಚಿವರಾಗಿದ್ದರು. ಅಂದು ಜಿಲ್ಲೆಯಲ್ಲಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಹಲವು ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆಗಲೂ ಇವರು ಸರ್ಕಾರಿ ಇಲಾಖೆಗಳಿಂದ ಹಣ ವಸೂಲಿ ಮಾಡಿದ್ದರೇ ಎಂದು ಪ್ರಶ್ನಿಸಿದ ಅವರು, ಅಂದಿನ ತಮ್ಮ ಅನುಭವವನ್ನು ಇಂದು ನಮಗೆ ಹೇಳುತ್ತಿದ್ದಾರೆಯೇ ಎಂದು ಟೀಕಿಸಿದರು.
ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜನೆ ಕುರಿತು ವಾರದಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇ ಗೌಡರು ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಶ್ರಮಿಸುತ್ತಿದ್ದಾರೆ. ಆದರೆ ಎಚ್.ಡಿ. ರೇವಣ್ಣ ಅವರು ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿಲ್ಲ. ರೇವಣ್ಣ ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ ಸಚಿವರನ್ನು ಭೇಟಿ ಮಾಡಬಹುದಾಗಿತ್ತು. ಆದರೆ ಆ ಕಾರ್ಯ ಇಲ್ಲಿಯವರೆಗೂ ಆಗಿಲ್ಲ. ಜಿಲ್ಲೆಯಲ್ಲಿ ರೇವಣ್ಣ ಅವರಿಗೆ ವ್ಯಾಪಾರ ಕಡಿಮೆಯಾಗಿದೆ. ಹಾಗಾಗಿ ಪೊಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಏತ ನೀರಾವರಿ ಮೂಲಕ ದಿಡಗ ಭಾಗದ ಕೆರೆಗಳನ್ನು ನೀರು ತುಂಬಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ದಿಡಗ ಹಾಗೂ ತುಮಕೂರು ಏತ ನೀರಾವರಿ ಯೋಜನೆಗೆ ₹ 74 ಕೋಟಿ ಅನುದಾನ ನೀಡಿದ್ದಾರೆ. ಈ ಯೋಜನೆಯಿಂದ ಸುಮಾರು 18 ಕೆರೆಗಳು ತುಂಬಲಿದ್ದು, 32 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 16ಸಾವಿರ ಪೋಡಿ ದುರಸ್ತಿ ಪ್ರಕರಣ ಇತ್ಯರ್ಥ ಮಾಡಲಾಗಿದೆ. 40ಸಾವಿರ ಕುಟುಂಬಗಳಿಗೆ ಕಂದಾಯ ಇಲಾಖೆಯಿಂದ ಅನುಕೂಲವಾಗಿದೆ. ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವರ ಜನಸ್ಪಂದನಾ ಕಾರ್ಯಕ್ರಮದಲ್ಲಿ 1,100 ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸಲಾಗಿದ್ದು, ನೀರಾವರಿ ಯೋಜನೆ ಅಭಿವೃದ್ಧಿಗೆ ಚನ್ನರಾಯಪಟ್ಟಣ ತಾಲ್ಲೂಕಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ ಎಂದರು.
ಪ್ರಾಧಿಕಾರದ ಅಧ್ಯಕ್ಷ ಮೂರ್ತಿ, ಚನ್ನರಾಯಪಟ್ಟಣ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.