
ಅರಸೀಕೆರೆ: ರಸ್ತೆ ಸಂಚಾರಗಳು ಹಾಗೂ ತಿರುವುಗಳಲ್ಲಿ ಸಾಮಾನ್ಯ ಜ್ಞಾನವಾದ ಸೂಚನ ಫಲಕಗಳನ್ನು ಅನುಸರಿಸದೇ ನಿರ್ಲಕ್ಷ್ಯ ಮನೋಭಾವನೆಗಳಿಂದ ಇಂದು ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.
ನಗರದ ಹೊರವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪಘಾತ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಂಚಾರದ ನಿಯಮಗಳು ಚಿಹ್ನೆಗಳು ಹಾಗೂ ಇತರ ವಾಹನಗಳ ಚಾಲಕರು ನೀಡುವ ಸೂಚನೆಗಳನ್ನು ನಿರ್ಲಕ್ಷಿಸಿದಾಗ ಅಪಘಾತಗಳು ಸಂಭವಿಸುತ್ತದ್ದು ಅವುಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳು ಅತಿ ವೇಗ ಹಾಗೂ ನಿಯಮಗಳ ಉಲ್ಲಂಘನೆಯಿಂದ ವಾಹನಗಳನ್ನು ಚಲಾಯಿಸಬಾರದು’ ಎಂದು ಸಲಹೆ ನೀಡಿದರು.
ಸಾರಿಗೆ ಸಂಸ್ಥೆ ನಿರೀಕ್ಷಕ ಪದ್ಮನಾಭ ಮಾತನಾಡಿ, ‘ಅತಿಯಾದ ವೇಗವು ಅಪಘಾತಕ್ಕೆ ಆಹ್ವಾನ ನೀಡುತ್ತದೆ. ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದು ಹಾಗೂ ಅಗತ್ಯ ದಾಖಲೆಗಳು ಇಲ್ಲದೆ ವಾಹನ ಚಾಲನೆಯೂ ಅಪರಾಧವಾಗುತ್ತದೆ. ವಾಹನ ಸವಾರರು ಕಾಳಜಿಯಿಂದ ವಾಹನ ಚಲಾಯಿಸಬೇಕು’ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಂಚಾರ ಸೂಚನಾ ಫಲಕಗಳ ಕುರಿತು ಪರೀಕ್ಷೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾಲೇಜಿನ ಪ್ರಾಂಶುಪಾಲ ಕಂಚಿರಾಯ ಸೇರಿದಂತೆ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.