
ಹಳೇಬೀಡು: ಕಳಪೆ ಕಾಮಗಾರಿಯಿಂದ ಕರಿಯಮ್ಮ ಬೀದಿ ಹಾಗೂ ಬ್ರಾಹ್ಮಣ ಬೀದಿಯ ರಸ್ತೆ ಗುಂಡಿ ಬಿದ್ದಿದೆ. ಕಾಮಗಾರಿ ಮುಗಿದು 7 ತಿಂಗಳು ಕಳೆಯುವ ಮೊದಲೇ ರಸ್ತೆ ಗುಂಡಿ ಬಿದ್ದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕರಿಯಮ್ಮ ಬೀದಿ ಮೂಲಕ ಮುತ್ತಿನ ವೀರಭದ್ರಸ್ವಾಮಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಎಸ್.ಜಿ.ಆರ್. ಶಾಲೆ ಬಳಿ ಡಾಂಬರ್ ರಸ್ತೆಯಲ್ಲಿ ಎರಡು ಕಡೆ ಭೀಕರ ಗುಂಡಿ ಬಿದ್ದಿವೆ. ಸಾಕಷ್ಟು ಕಡೆ ಸಣ್ಣ ಗುಂಡಿಗಳು ಕಾಣಿಸಿಕೊಂಡಿವೆ. ವಾಹನ ಸಂಚಾರದಿಂದ ಗುಂಡಿಗಳು ಕಾಲಕ್ರಮೇಣ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಕರಿಯಮ್ಮ ಬೀದಿ, ಬ್ರಾಹ್ಮಣರ ಬೀದಿ ಹಾಗೂ ಮೂರು ಕಡೆ ಅಡ್ಡ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಡಾಂಬರ್ ಹಾಗೂ ಜೆಲ್ಲಿ ಮಿಶ್ರಣವನ್ನು ತೆಳುವಾಗಿ ಹರಡಿ ರೋಲ್ ಮಾಡಿರುವುದರಿಂದ ಬೇಗ ಕಿತ್ತು ಬರುತ್ತಿದೆ ಎನ್ನುತ್ತಾರೆ ಜನರು.
ಗುಂಡಿ ಬಿದ್ದಿರುವ ಜಾಗ ಹಾಲಿನ ಡೇರಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಟ್ಯಾಂಕರ್ ಬಂದು ಡೇರಿಯಿಂದ ಹಾಲು ಸಂಗ್ರಹ ಮಾಡಿಕೊಂಡು ಹಾಸನ ಹಾಲು ಒಕ್ಕೂಟಕ್ಕೆ ತೆರಳುತ್ತದೆ. ಉಳಿದಂತೆ ಈ ರಸ್ತೆಯಲ್ಲಿ ಅಪರೂಪಕ್ಕೆ ಲಘು ವಾಹನಗಳು ಸಂಚರಿಸುತ್ತವೆ.
ಕಡಿಮೆ ವಾಹನ ಸಂಚಾರದ ಭಾರವನ್ನು ತಡೆಯಲಾರದ ಸ್ಥಿತಿಯಲ್ಲಿ ಹೊಸ ರಸ್ತೆ ನಿರ್ಮಾಣವಾಗಿದೆ. ಶೀಘ್ರದಲ್ಲಿಯೇ ಡಾಂಬರ್ ಹಾಕಿದ ಅವಶೇಷ ಇಲ್ಲದಂತೆ ರಸ್ತೆ ನಿರ್ನಾಮ ಆಗುವ ಸಾಧ್ಯತೆ ಇದೆ ಎಂಬ ದೂರು ಇಲ್ಲಿಯ ಜನರದ್ದು.
ಒಮ್ಮೆ ರಸ್ತೆ ಡಾಂಬರೀಕರಣ ಮಾಡಿದರೆ ಕನಿಷ್ಠ 10 ವರ್ಷವಾದರೂ ಬಾಳಿಕೆ ಬರಬೇಕು. ಒಂದು ವರ್ಷ ಆಗುವ ಮೊದಲೇ ಕಿತ್ತು ಬರುತ್ತಿದೆ. ರಸ್ತೆ ಹಾಳಾಗುತ್ತಿರುವುದರಿಂದ ವಾಹನ ಸಂಚಾರಕ್ಕೆ ಮಾತ್ರವಲ್ಲದೆ, ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಿಲ್ಲದಂತಾಗುತ್ತದೆ ಎಂದು ಜನರು ನಮ್ಮನ್ನು ಕೇಳುತ್ತಿದ್ದಾರೆ ಎಂದು ವಾರ್ಡ್ ಸದಸ್ಯ ಎಚ್.ಎಂ. ನಿಂಗಪ್ಪ ಹೇಳಿದರು.
ಸಣ್ಣ ಅಂದಾಜು ಮೊತ್ತದ ಗ್ರಾಮ ಪಂಚಾಯಿತಿ ಅನುದಾನದ ರಸ್ತೆಗಳು ಬರುವಷ್ಟು ಬಾಳಿಕೆ ಬರುತ್ತಿಲ್ಲ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಗುತ್ತಿಗೆದಾರರಿಂದ ಗುಣಮಟ್ಟದ ಕೆಲಸ ಮಾಡಿಸಿಲ್ಲ. ಮಳೆಗಾಲಕ್ಕೆ ರಸ್ತೆ ಪೂರ್ಣ ಹಾಳಾಗಲಿದೆ. ಕಾಮಗಾರಿ ಆರಂಭದಲ್ಲಿಯೇ ಕಳಪೆ ಬಣ್ಣ ಬಯಲಾಗಿತ್ತು. ಉಡಾಫೆಯಿಂದ ರಸ್ತೆ ನಿರ್ಮಿಸಿದರು. ಸರ್ಕಾರದ ಹಣವನ್ನು ನೀರು ಪಾಲು ಮಾಡಿದಂತಾಗಿದೆ. ಎಂಜಿನಿಯರ್ ಹಾಗೂ ಗುತ್ತಿಗೆದಾರರು ಸುಮಾರು 100 ಮೀಟರ್ ರಸ್ತೆಗೆ ಡಾಂಬರ್ ಹಾಕಿಸದೇ ಕಾಮಗಾರಿ ಅಪೂರ್ಣಗೊಂಡಿದೆ ಎಂದು ಬಸವೇಶ್ವರ ಬಳಗದ ಆಧ್ಯಕ್ಷ ಎಚ್.ಸಿ. ಚೇತನ್ ದೂರಿದರು.
ಈ ರಸ್ತೆಯಲ್ಲಿ ಖಾಸಗಿ ಶಾಲೆ ಇದೆ. ಶಾಲೆ ಮುಂದೆ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಗಳ ಸಂಖ್ಯೆ ಏರಿಕೆಯಾದರೆ, ಮಕ್ಕಳು ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ಬರುತ್ತದೆ.
ಈ ರಸ್ತೆ ಸಂಪರ್ಕದ ಕಲ್ಮಠ ಬೀದಿ, ಬ್ರಾಹ್ಮಣ ಬೀದಿ, ಕರಿಯಮ್ಮ ಬೀದಿ, ಕುಂಬಳೇಶ್ವರ ರಸ್ತೆಗಳಲ್ಲಿ ಹಿಂದಿನ ಕಾಲದಿಂದಲೂ ಹೆಚ್ಚು ಜನಸಂಖ್ಯೆ ಇದೆ. ಇತ್ತೀಚೆಗಷ್ಟೆ ಹೊಯ್ಸಳ ಬಡಾವಣೆಯಲ್ಲಿ ಹೊಸ ಮನೆಗಳಾಗಿವೆ. ಇಲ್ಲಿಯ ರಸ್ತೆಗಳಲ್ಲಿ ಲೆಕ್ಕವಿಲ್ಲದಷ್ಟು ಜನ ಓಡಾಡುತ್ತಾರೆ. ಪ್ರಮುಖ ರಸ್ತೆಗಳ ಪರಿಸ್ಥಿತಿ ಹೀಗಾದರೆ ಹೇಗೆ ಎಂಬ ಪ್ರಶ್ನೆ ಇಲ್ಲಿಯ ನಿವಾಸಿಗಳನ್ನು ಕಾಡುತ್ತಿದೆ.
‘ನಾನು ಬೇಲೂರು ತಾಲ್ಲೂಕು ಲೋಕೋಪಯೋಗಿ ಇಲಾಖೆಯ ಅಧಿಕಾರ ವಹಿಸಿಕೊಳ್ಳುವ ಮೊದಲೆ ಕಾಮಗಾರಿ ಪೂರ್ಣಗೊಂಡಿದೆ. ತಕ್ಷಣ ಸ್ಥಳ ಪರಿಶೀಲನೆ ನಡೆಸುತ್ತೇನೆ’ ಎನ್ನುತ್ತಾರೆ ಇಲಾಖೆ ಎಇಇ ಕೃಷ್ಣೇಗೌಡ.
ಆರಂಭದಲ್ಲಿ ಕಾಮಗಾರಿ ಕಳಪೆ ಎಂಬ ಕೂಗು ಕೇಳಿ ಬಂತು. ಅಂದು ಎಚ್ಚೆತ್ತುಕೊಂಡು ಗುಣಮಟ್ಟ ಕಾಪಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ.– ಎಚ್.ಸಿ.ಚೇತನ್, ಬಸವೇಶ್ವರ ಬಳಗ ಅಧ್ಯಕ್ಷ
ಲೋಕೋಪಯೋಗಿ ಇಲಾಖೆಯವರು ತಕ್ಷಣ ಜಾಗೃತರಾಗಬೇಕು. ಗುಂಡಿ ಬಿದ್ದ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು.– ಎಚ್.ಎಂ. ನಿಂಗಪ್ಪ, ಗ್ರಾಪಂ ಸದಸ್ಯ
ಐತಿಹಾಸಿಕ ದೇಗುಲಗಳ ಸಂಪರ್ಕ ರಸ್ತೆ
ಗ್ರಾಮ ದೇವತೆ ಕರಿಯಮ್ಮ ದೇವಾಲಯ ಹೊಯ್ಸಳರ ಕಾಲದ ಕಸ್ತೂರಿ ರಂಗನಾಥ ಸ್ವಾಮಿ ಮುತ್ತಿನ ವೀರಭದ್ರಸ್ವಾಮಿ ಹಾಗೂ ಕುಂಬಳೇಶ್ವರ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ ನೋಡುವವೀಆ ಇಲ್ಲದಂತಾಗಿದೆ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ. ಈ ರಸ್ತೆಯಲ್ಲಿರುವ ಹೊಯ್ಸಳರ ಕಾಲದ ದೇವಾಲಯಗಳಿಗೆ ಯುನೆಸ್ಕೊ ತಂಡದವರು ಹಲವಾರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದೇವಾಲಯಗಳನ್ನು ಪ್ರಚಾರಕ್ಕೆ ತಂದು ಅಭಿವೃದ್ದಿ ಪಡಿಸುವ ಯೋಜನೆ ಪ್ರವಾಸೋದ್ಯಮ ಇಲಾಖೆಯ ಮುಂದಿದೆ. ಇಲ್ಲಿಯ ದೇಗುಲಗಳಿಗೆ ದೂರದ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಹೀಗಾಗಿ ಈ ರಸ್ತೆ ಗಟ್ಟಿಯಾಗಿರಲು ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರೈತ ಮುಖಂಡ ಗಂಗಾಧರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.