ADVERTISEMENT

ಬೇಲೂರು ಪುರಸಭೆ ಮಳಿಗೆ ಹರಾಜಿನಲ್ಲಿ ಅವ್ಯವಹಾರ: ಸಾರ್ವಜನಿಕರ ಆರೋಪ

ಮಲ್ಲೇಶ
Published 7 ಜನವರಿ 2025, 6:51 IST
Last Updated 7 ಜನವರಿ 2025, 6:51 IST
ಬೇಲೂರು ಪುರಸಭೆಯ ಕಟ್ಟಡ
ಬೇಲೂರು ಪುರಸಭೆಯ ಕಟ್ಟಡ   

ಬೇಲೂರು: ಇಲ್ಲಿನ ಪುರಸಭೆಯ 63 ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಟೆಂಡರ್ ರದ್ದುಪಡಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕೆಲ ಖಾಸಗಿ ವ್ಯಕ್ತಿಗಳು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದರೂ, ಜನವರಿ 2 ರಂದು ಟೆಂಡರ್ ನಡೆಸಲಾಗಿದೆ. ಒಂದೇ ಸಾಲಿನಲ್ಲಿ ಇರುವ ಮಳಿಗೆಗಳಲ್ಲಿ ₹3 ಸಾವಿರಕ್ಕೆ ಒಂದು ಮಳಿಗೆ ಬಿಡ್ ಅಗಿದ್ದರೆ, ಅದರ ಪಕ್ಕದ ಮಳಿಗೆ ₹50 ಸಾವಿರಕ್ಕೆ ಬಿಡ್ ಆಗಿದೆ.

ಕಳೆದ ಬಾರಿ ₹40ಸಾವಿರದಿಂದ ₹3 ಲಕ್ಷದವರೆಗೆ ಬಿಡ್‌ಗೆ ಹೋಗಿದ್ದ ಮಳಿಗೆಗಳು ಈ ಬಾರಿ ₹3ಸಾವಿರದಿಂದ ₹5 ಸಾವಿರಕ್ಕೆ ಬಿಡ್ ಅಗಿವೆ. ಪುರಸಭೆಯವರು ಹಾಲಿ ಇರುವ ಬಾಡಿಗೆದಾರರಿಗೆ ಮಳಿಗೆ ಮಾಡಿಕೊಡಲು, ಒಂದು ಮಳಿಗೆಗೆ ₹10ರಿಂದ ಲಕ್ಷದಿಂದ ₹15 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದು, ₹2ಲಕ್ಷದಿಂದ ₹3ಲಕ್ಷ ಹಣ ಮುಂಗಡ ಪಡೆದಿದ್ದಾರೆ ಎಂದು ವರ್ತಕರು ಹೇಳುತ್ತಿದ್ದಾರೆ.

ADVERTISEMENT

ಕೆಲ ಮಧ್ಯವರ್ತಿಗಳು ಬಿಡ್‌ನಲ್ಲಿ ಭಾಗವಹಿಸಿದ್ದು, ಬಾಡಿಗೆ ಕಡಿಮೆ ಮಾಡಲು ಹಾಲಿ ಇರುವ ಬಾಡಿಗೆದಾರರಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣ, ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿವೆ.

ಪುರಸಭೆಯ 134 ವಾಣಿಜ್ಯ ಮಳಿಗೆಗಳನ್ನು 12 ವರ್ಷಗಳ ಕಾಲ ಬಾಡಿಗೆ ನೀಡಲಾಗಿತ್ತು. ಅದರ ಅವಧಿಯು 2023ರ ಡಿಸೆಂಬರ್‌ಗೆ ಮುಕ್ತಾಯವಾಗಿತ್ತು. ಈ ಹಿನ್ನಲೆಯಲ್ಲಿ 2023 ರ ಡಿ.21 ರಂದು ಈ ಟೆಂಡರ್ ಮೂಲಕ ಬಿಡ್ ನಡೆಸಲಾಗಿತ್ತು. ಆ ವೇಳೆ ₹50ಸಾವಿರದಿಂದ ₹3ಲಕ್ಷದವರೆಗೆ ಬಿಡ್ ಮಾಡಲಾಗಿತ್ತು.

ನಂತರ ಪುರಸಭೆ ಸದಸ್ಯರ ಸಭೆ ಕರೆದು, ಟೆಂಡರ್ ರದ್ದು ಪಡಿಸುವ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಟೆಂಡರ್ ರದ್ದುಪಡಿಸಲಿಲ್ಲ. ಹಾಗಾಗಿ 71 ಮಳಿಗೆ ಬಾಡಿಗೆದಾರರು ಬಾಡಿಗೆಯ ಕರಾರುಪತ್ರ ಮಾಡಿಕೊಂಡರು. ಹಾಲಿ ಇದ್ದ 19 ಮಳಿಗೆ ಬಾಡಿಗೆದಾರರು ನಮಗೇ ಮಳಿಗೆ ಬೇಕು ಎಂದು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಮಳಿಗೆಗಳ ಮರು ಹರಾಜಿಗೆ ಹೈಕೋರ್ಟ್ ಆದೇಶ ನೀಡಿತ್ತು.

ಈ ಹಿನ್ನಲೆಯಲ್ಲಿ ಹೈಕೋರ್ಟ್‌ಗೆ ಹೋದ 19 ಹಾಗೂ ಬಿಡ್‌ನಲ್ಲಿ ಭಾಗವಹಿಸಿ ಒಪ್ಪಂದ ಮಾಡಿಕೊಳ್ಳದ 44 ಮಳಿಗೆಗಳ ಹರಾಜು ನಡೆಸಲು 2023ರ ಅಕ್ಟೋಬರ್ 14 ರಂದು ನಿಗದಿಯಾಗಿತ್ತು. ಆದರೆ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಕಾರಣಕ್ಕೆ ಪುರಸಭೆ ಆಡಳಿತವು ಕೊನೆಯ ಕ್ಷಣದಲ್ಲಿ ಟೆಂಡರ್ ರದ್ದುಪಡಿಸಿತ್ತು.

ಕಾನೂನು ಪ್ರಕಾರ ಹರಾಜು ನಡೆಸುವಂತೆ ನಾನು ಸೂಚಿಸಿದ್ದೆ. ಆರೋಪಗಳ ಬಗ್ಗೆ ನನಗೆ ತಿಳಿದಿಲ್ಲ. ಭ್ರಷ್ಟಾಚಾರ ನಡೆದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಎಚ್.ಕೆ. ಸುರೇಶ್ ಶಾಸಕ

ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ನನಗೆ ಅಗದವರು ಮಾಟಮಂತ್ರ ಮಾಡಿಸಿದ್ದವರೂ ನನಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಊಹಾಪೋಹ ಹರಿಬಿಟ್ಟಿದ್ದಾರೆ. ಎ.ಆರ್.ಅಶೋಕ್ ಪುರಸಭೆ ಅಧ್ಯಕ್ಷ

ನ್ಯಾಯಾಲಯದ ತಡೆಯಾಜ್ಙೆ ಜನವರಿ 2 ರ ಮಧ್ಯಾಹ್ನ ತಲುಪಿದ್ದು ಹರಾಜು ನಿಲ್ಲಿಸಲು ಸಾಧ್ಯವಾಗಲಿಲ್ಲ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ. ಸುಜಯ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ

ಭ್ರಷ್ಟಾಚಾರ ನಡೆದಿರುವ ಕಾರಣ ಈಗ ನಡೆದಿರುವ ಟೆಂಡರ್ ರದ್ದುಪಡಿಸಬೇಕು. ಎಲ್ಲ ಸಾರ್ವಜನಿಕರು ಭಾಗವಹಿಸುವಂತೆ ನಿಯಮ ತಂದು ಮರು ಟೆಂಡರ್ ಕರೆಯಬೇಕು. ಡಿ.ಕೆ.ವೆಂಕಟೇಶ್ ಬೇಲೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.