ADVERTISEMENT

ವಿಷ ಬೀಜ ಬಿತ್ತುತ್ತಿರುವ ಬಾಡಿಗೆ ಇತಿಹಾಸಕಾರರು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಚಾರಕ್ ನವೀನ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 15:40 IST
Last Updated 20 ಅಕ್ಟೋಬರ್ 2019, 15:40 IST
ಹಾಸನದಲ್ಲಿ ಏರ್ಪಡಿಸಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಆರ್ ಎಸ್ಎಸ್ ಕಾರ್ಯಕರ್ತರು.
ಹಾಸನದಲ್ಲಿ ಏರ್ಪಡಿಸಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಆರ್ ಎಸ್ಎಸ್ ಕಾರ್ಯಕರ್ತರು.   

ಹಾಸನ: ‘ಬ್ರಿಟಿಷ್ ಮನಸ್ಥಿತಿ ಉಳ್ಳವರು ಹಣಕ್ಕಾಗಿ ಕೃತಿ ರಚಿಸುವ ಬಾಡಿಗೆ ಇತಿಹಾಸಕಾರರ ಪುಸ್ತಕ ಓದಿ ಸಾವರ್ಕರ್ ಅವರನ್ನು ಹಂತಕ ಎನ್ನುತ್ತಿದ್ದಾರೆ. ರಾಮನ ಹುಟ್ಟು ಪ್ರಶ್ನಿಸುತ್ತಿದ್ದಾರೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಚಾರಕ್ ನವೀನ್ ಹೇಳಿದರು.

ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪಥ ಸಂಚಲನದಲ್ಲಿ ಮಾತನಾಡಿ, ‘ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲ ಪಟ್ಟಭದ್ರ ಶಕ್ತಿಗಳು, ರಾಮನ ಹುಟ್ಟು ಪ್ರಶ್ನಿಸುತ್ತಿದ್ದರು. ರಾವಣ ಇದ್ದ ಮೇಲೆ ರಾಮ ಮತ್ತು ರಾಮ ಸೇತುವೆ ಇದ್ದದ್ದು ಸತ್ಯವಲ್ಲವೇ’ ಎಂದು ಪ್ರಶ್ನಿಸಿದರು.

‘ನಾಗರಿಕರು ಬಾಡಿಗೆ ಇತಿಹಾಸಕಾರರ ಬಗ್ಗೆ ಎಚ್ಚರ ವಹಿಸಬೇಕು. ಹಣಕ್ಕಾಗಿ ದೇಶದಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನದಲ್ಲಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದ ಯುವಕ ತಪ್ಪು ಮಾಡಿದನ್ನು ಪ್ರಶ್ನಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಆದರೆ, ಕೆಲವೆಡೆ ಹಿಂದೂಗಳ ಕುಟುಂಬವನ್ನೇ ನಾಶಗೊಳಿಸಿದರೂ ಅಲ್ಲಿನ ಸರ್ಕಾರ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಅಸಮಧಾನ ವ್ಯಕ್ತ ಪಡಿಸಿದರು. ‌

ADVERTISEMENT

ಆಕರ್ಷಕ ಪಥಸಂಚಲನ: ನಗರದ ಎಂ.ಜಿ.ರಸ್ತೆಯಲ್ಲಿರುವ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಿಂದ ಆರ್.ಎಸ್.ಎಸ್. ಪಥ ಸಂಚಲನ ನಡೆಯಿತು.

ಅರಳೀ ಮರ ವೃತ್ತ, ಗೌರಿಕೊಪ್ಪಲು ರಸ್ತೆ, ಕಲ್ಲತ್ ಗಿರಿ ವೃತ್ತ, ರವೀಂದ್ರ ನಗರ 3ನೇ ಅಡ್ಡ ರಸ್ತೆ, ಹೊಯ್ಸಳ ನಗರ ಮುಖ್ಯ ರಸ್ತೆ, ಶ್ರೀ ಗಣಪತಿ ದೇವಾಲಯ ವೃತ್ತ, ಪಂಚಮ ವೃತ್ತ, ಕೆ.ಆರ್. ಪುರಂ 7ನೇ ಕ್ರಾಸ್, ಶಂಕರಮಠ ರಸ್ತೆ, ಎಂಜಿ. ರಸ್ತೆ ಮಾರ್ಗವಾಗಿ ಸಾಗಿ ಮತ್ತೆ ಆದಿಚುಂಚನಗಿರಿ ಶಾಲೆ ಆವರಣದಲ್ಲೇ ಮುಕ್ತಾಯವಾಯಿತು.

ಪಥ ಸಂಚಲನ ವೇಳೆ ದಾರಿ ಉದ್ದಕ್ಕೂ ಮನೆ ಮುಂದೆ ಹೆಂಗೆಳೆಯರು ರಂಗೋಲಿ ಬಿಡಿಸಿದ್ದರು. ಕೆಲವರು ಪುಷ್ಪಾರ್ಚನೆ ಮಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.