
ಸಕಲೇಶಪುರ: ಪಟ್ಟಣದ ಬಾಳೇಗದ್ದೆ ಬಡಾವಣೆಯ ರಸ್ತೆ ಬದಿ ಕಸ ಹಾಕುವ ಸ್ಥಳವನ್ನು ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಗುರುವಾರ ಸ್ವಚ್ಛಗೊಳಿಸಿ ಬ್ಯೂಟಿ ಸ್ಪಾಟ್ ಮಾಡಿ ಜಾಗೃತಿ ಮೂಡಿಸಿದರು.
‘ಮನೆ ಮನೆಗೆ ಹಸಿ ಕಸ ಹಾಗೂ ಒಣ ಕಸ ಸಂಗ್ರಹ ಮಾಡಲು ಆಟೊಗಳನ್ನು ಕಳಿಸಿದರೂ ಕೆಲ ನಿವಾಸಿಗಳು ಮನೆ, ಅಂಗಡಿ, ಹೊಟೆಲ್‌ಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಾರೆ. ಪ್ರತಿ ದಿನವೂ ಜಾಗೃತಿ ಮೂಡಿಸುತ್ತಿದ್ದರೂ ಸ್ವಚ್ಛತೆಗೆ ಗಮನ ಕೊಡದೆ, ಉಡಾಫೆಯಿಂದ ಕಸ ತಂದು ಸುರಿಯುತ್ತಿರುವುದರ ವಿರುದ್ಧ ಪುರಸಭೆಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಾಧಿಕಾರಿ ಮಹೇಶ್ವರಪ್ಪ ಹೇಳಿದರು.
ಸಂದಿ ಮೂಲೆ ಕಂಡರೂ ಸಹ ವಾಹನಗಳಲ್ಲಿ ಬಂದು ಕಸ ಎಸೆದು ಹೋಗುತ್ತಾರೆ. ವಿದ್ಯಾವಂತರು, ಬುದ್ಧಿವಂತರು ಎನ್ನಿಸಿಕೊಂಡವರೇ ಈ ರೀತಿ ಮಾಡುತ್ತಿರುವುದು. ಕಾನೂನು ಉಲ್ಲಂಘನೆಯನ್ನೇ ಕೆಲವರು ಪ್ಯಾಷನ್ ಮಾಡಿಕೊಂಡಿದ್ದಾರೆ. ಯಾರಾದರೂ ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡು ಬಂದರೆ, ಸಾರ್ವಜನಿಕರು ಮೊಬೈಲ್ ಪೋನ್‌ನಲ್ಲಿ ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಿ. ಆ ವಿಡಿಯೊ ಆಧರಿಸಿ ಪುರಸಭೆಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಗ್ಯ ಅಧಿಕಾರಿ ದಾನವೇಂದ್ರ, ಆರೋಗ್ಯ ನಿರೀಕ್ಷಕ ಸೋಮಶೇಖರ್, ರೇವಣ್ಣ, ರೂಪಾ, ಪುರಸಭೆಯ ಕಮ್ಯೂನಿಟಿ ಮೊಬಿಲೈಸರ್ಸ್ ಪಲ್ಲವಿ, ಕಲಾವತಿ, ತರನುಂ ಬಾನು, ಸಿಆರ್‌ಪಿ ಎಂ.ಎಸ್. ಗಾನವಿ ಪೌರಕಾರ್ಮಿಕರಾದ ವಿನೋದ, ಕಾರ್ತಿಕ್, ಪುನಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.