ADVERTISEMENT

ಶಾಲೆಗೆ ಸೌಲಭ್ಯ ಕಲ್ಪಿಸಿ: ವೈ.ಬಿ.ಕಾಂತರಾಜು ಸರ್ಕಾರಕ್ಕೆ ಒತ್ತಾಯ

ಸಮ್ಮೇಳನದ ಸರ್ವಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 13:20 IST
Last Updated 29 ಡಿಸೆಂಬರ್ 2018, 13:20 IST
ಸಾಲಗಾಮೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೈ.ಬಿ.ಕಾಂತರಾಜು ಅವರನ್ನು ಬೆಳ್ಳಿ ಸಾರೋಟ್‌ನಲ್ಲಿ ಮೆರವಣಿಗೆ ಮಾಡಲಾಯಿತು.
ಸಾಲಗಾಮೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೈ.ಬಿ.ಕಾಂತರಾಜು ಅವರನ್ನು ಬೆಳ್ಳಿ ಸಾರೋಟ್‌ನಲ್ಲಿ ಮೆರವಣಿಗೆ ಮಾಡಲಾಯಿತು.   

ಹಾಸನ : ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮೂಲಕ ಕನ್ನಡ ಭಾಷೆ ಉಳಿವಿಗೆ ಸರ್ಕಾರ ಮುಂದಾಗಬೇಕು ಎಂದು ಸಮ್ಮೇಳನದ ಅಧ್ಯಕ್ಷ ವೈ.ಬಿ.ಕಾಂತರಾಜು ಒತ್ತಾಯಿಸಿದರು.

ತಾಲ್ಲೂಕಿನ ಸಾಲಗಾಮೆ ಹೋಬಳಿ ಬಿಡಾರದಹಳ್ಳಿ ಬೂದೇಶ್ವರ ಮಠದಲ್ಲಿ ನಡೆದ ಸಾಲಗಾಮೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ, ದಾಖಲಾತಿ ಹಾಗೂ ಹಾಜರಾತಿ ಹೆಚ್ಚಿಸಲು ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕು ಎಂದು ಹೇಳಿದರು.

ADVERTISEMENT

ಅರೆಮಲೆನಾಡು ಸಾಲಗಾಮೆ ಹೋಬಳಿಯಲ್ಲಿ ಪ್ರಮುಖವಾಗಿ ಭತ್ತ, ಜೋಳ, ರಾಗಿ, ಆಲೂಗೆಡ್ಡೆ ಹಾಗೂ ತರಕಾರಿ ಬೆಳೆಯಲಾಗುತ್ತದೆ. ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕು. ಎತ್ತಿನಹೊಳೆ ಯೋಜನೆಯಡಿ ಚೆಕ್ ಡ್ಯಾಮ್ ನಿರ್ಮಿಸಿ, ಕೆರೆಗಳ ಹೂಳು ತೆಗೆಸಿ ನೀರು ತುಂಬಿಸಬೇಕು ಎಂದು ಮನವಿ ಮಾಡಿದರು.

ಗೀಗಿ ಪದ, ಸೋಬಾನೆ ಪದ, ತಂಬೂರಿ ಪದ, ರಾಗಿ ಬೀಸುವ ಪದ ಮುಂತಾದ ಕಲೆಗಳು ಶ್ರೀಮಂತವಾಗಿವೆ. ಜನಪದ ಗಾಯಕರಾದ ಗಂಗಮ್ಮ, ರಂಗಮ್ಮ, ಗೌರಮ್ಮ, ಸಾಮಾಜಿಕ ಕಾರ್ಯಕರ್ತ ಆರ್.ಜಿ.ಗಿರೀಶ್, ರಂಗಕರ್ಮಿ ವೈ.ಎಸ್.ರಮೇಶ್‌ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ನಾಡು, ನುಡಿ, ನೆಲೆ, ಜಲ ವಿಚಾರದಲ್ಲಿ ಕುತ್ತು ಬಂದರೇ ಮೊದಲು ಪ್ರತಿಭಟಿಸುವವರು ಗ್ರಾಮಿಣ ಭಾಗದ ಜನರು. ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಯಾಗಬೇಕು. ಐಎಎಸ್‌ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಪತ್ರ ವ್ಯವಹಾರ, ಟಿಪ್ಪಣಿ ಬರೆಯುವುದು ನಿಲ್ಲಬೇಕು. ಕನ್ನಡ ಶಾಲೆಗಳನ್ನು ಮುಚ್ಚುವ ಉದ್ದೇಶದಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸುತ್ತಿರುವುದು ಬೇಸರದ ಸಂಗತಿ. ಅದರ ಬದಲು 1ನೇ ತರಗತಿಯಿಂದಲೇ ಇಂಗ್ಲಿಷ್ ಅನ್ನು ದ್ವಿತೀಯ ಭಾಷೆಯಾಗಿ ಕಲಿಸಲಿ. ಜತೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಒ.ಮಹಾಂತಪ್ಪ, ಸಾಲಗಾಮೆ ಹೋಬಳಿ ಅಧ್ಯಕ್ಷ ಗೌಡಗೆರೆ ಪ್ರಕಾಶ್, ಸಾಹಿತಿ ಎನ್.ಎಲ್. ಚನ್ನೇಗೌಡ, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜು, ಸಮ್ಮೇಳನದ ಕಾರ್ಯಾಧ್ಯಕ್ಷ ವೈ.ಎಸ್.ರಮೇಶ್, ಬೂದೇಶ್ವರ ಮಠದ ಧರ್ಮದರ್ಶಿ ಎನ್.ಮಂಜೇಗೌಡ, ಮಠದ ಉಪಾಧ್ಯಕ್ಷ ಗುರುಸ್ವಾಮಿಗೌಡ, ನಿಟ್ಟೂರು ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.