
ಅರಕಲಗೂಡು: ಜಲ ಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕು ಎಂದು ಎಸ್ಸಿ, ಎಸ್ಟಿ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಸಮುದಾಯದ ಮುಖಂಡರು ಆಗ್ರಹಿಸಿದರು.
ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಬರಗೂರು ರವಿ ಮಾತನಾಡಿ, ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿ ಸಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಸಮುದಾಯದ ಮುಖಂಡರು, ಗುತ್ತಿಗೆದಾರರು ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಡೆಸುತ್ತಿದ್ದಾರೆ. ದಲಿತರು ವಾಸಿಸುವ ಬೀದಿಗಳಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಅಗೆದು ಮುಚ್ಚದೆ ಹಾಗೆ ಬಿಡಲಾಗಿದೆ. ಪೈಪ್‌ಗಳನ್ನು ಮೂರು ಅಡಿ ಆಳಕ್ಕೆ ಅಳವಡಿಸಿಲ್ಲ. ಕೆಲವು ಕೊರೆಸಿರುವ ಬೋರ್‌ವೆಲ್‌ಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಹಳೆಯ ಪೈಪ್‌ಲೈನ್‌ಗಳನ್ನು ಅಗೆದು ಹಾಳುಮಾಡಲಾಗಿದೆ ಎಂದರು.
ಪ.ಪಂ. ಮಾಜಿ ಅಧ್ಯಕ್ಷ ಕೃಷ್ಣಯ್ಯ, ಚಂದ್ರು ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲೂ ಕಾಮಗಾರಿ ಅಧ್ವಾನಗೊಂಡಿದೆ. ಕಾಮಗಾರಿ ಸರಿಯಿಲ್ಲದೆ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಕೆಲವು ಕಡೆ ಟ್ಯಾಂಕ್‌ಗಳು ಸೋರುತ್ತಿವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜೆಜೆಎಂ ಎಂಜಿನಿಯರ್ ರಾಹುಲ್, ಕೊರಟಿಕೆರೆಯಲ್ಲಿ ಟ್ಯಾಂಕ್ ಸೋರುತ್ತಿದ್ದು, ಬದಲಿ ಟ್ಯಾಂಕ್ ನಿರ್ಮಿಸಲಾಗುವುದು ಎಂದರು.
ತಾ.ಪಂ. ಇಒ ಶ್ರೀನಿವಾಸ್ ಮಾತನಾಡಿ, ಜೆಜೆಎಂ ಕಾಮಗಾರಿ ಪರಿಪೂರ್ಣವಾಗಿ ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಪಂಚಾಯಿತಿ ವಶಕ್ಕೆ ಪಡೆದುಕೊಳ್ಳುವಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದರು.
ಜೆಜೆಎಂ ಕುಡಿಯುವ ನೀರಿನ ಕಾಮಗಾರಿ ಗುಣಮಟ್ಟ ಪರಿಶೀಸಿಲಿ ವರದಿ ನೀಡಲು ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಮೂಲಕ ಕ್ರಮ ವಹಿಸುವುದಾಗಿ ತಹಶೀಲ್ದಾರ್ ಕೆ.ಸಿ. ಸೌಮ್ಯ ಭರವಸೆ ನೀಡಿದರು.
ವಕೀಲ ರಾಜೇಶ್ ಮಾತನಾಡಿ, ಗ್ರಾ.ಪಂ.ಗಳಲ್ಲಿ ಬೀದಿ ದೀಪ, ನೈರ್ಮಲ್ಯ ಇತರೆ ಕಾಮಗಾರಿಗಳಿಗೂ ಎಸ್ಸಿ,ಎಸ್ಟಿ ಹಣ ದುರುಪಯೋಗ ಮಾಡಲಾಗುತ್ತಿದೆ. ಈ ಕುರಿತು ಇಒ ಕೂಡ ಪರಿಶೀಲಿಸುತ್ತಿಲ್ಲ ಎಂದು ದೂರಿದರು.
ಯಾವ ಪಂಚಾಯಿತಿಗಳಲ್ಲಿ ಗುರುತರವಾಗಿ ಹಣ ದುರುಪಯೋಗ ಆಗಿದೆ, ಈ ಕುರಿತು ಲಿಖಿತವಾಗಿ ದೂರು ನೀಡಿದರೆ ತನಿಖೆ ನಡೆಸಿ ಅಂತಹ ಪಿಡಿಒಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಬಿಎಸ್‌ಪಿ ಮುಖಂಡ ಅತ್ನಿ ಹರೀಶ್ ಮಾತನಾಡಿ, ಅಬ್ಬೂರು ಮಾಚಗೌಡನಹಳ್ಳಿ ಗ್ರಾಮದ ಗೋಮಾಳದಲ್ಲಿ ಕಳೆದ 28 ವರ್ಷಗಳಿಂದ ಮನೆ ನಿರ್ಮಿಸಿಕೊಂಡಿದ್ದ ದಲಿತ ಮಹಿಳೆ ಚಿನ್ನಮ್ಮ ಅವರು ಶಿಥಿಲಗೊಂಡಿದ್ದ ಮನೆ ಕೆಡವಿದ್ದು, ಅದೇ ಜಾಗದಲ್ಲಿ ಹೊಸದಾಗಿ ಮನೆ ನಿರ್ಮಿಸಿಕೊಳ್ಳದಂತೆ ಕಿರುಕುಳ ನೀಡಲಾಗುತ್ತಿದೆ. ರಾಜಕೀಯ ಪಿತೂರಿ ನಡೆಸಿ ದಲಿತ ಮಹಿಳೆಯನ್ನು ಒಕ್ಕಲೆಬ್ಬಿಸಲಾಗುತ್ತಿದೆ. ದಲಿತ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ದಲಿತ ಮುಖಂಡರನ್ನು ಗ್ರಾಮಕ್ಕೆ ಕರೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ವಹಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ ಬಳಿಕ ಕಾವೇರಿದ್ದ ಸಭೆ ತಣ್ಣಗಾಯಿತು.
ಮುಖಂಡ ಲಕ್ಷ್ಮಣ್ ಮಾತನಾಡಿ, ಪಟ್ಟಣದಲ್ಲಿ ಮಾದಿಗ ಸಮುದಾಯ ಭವನ ನಿರ್ಮಿಸಲು ಜಾಗ ಒದಗಿಸಬೇಕು ಎಂದು ಮನವಿ ಮಾಡಿದರು. ಸೂಕ್ತ ಸ್ಥಳದಲ್ಲಿ ಜಾಗ ಒದಗಿಸುವಂತೆ ತಹಶೀಲ್ದಾರ್ ಸೌಮ್ಯ ಅವರು ಪ.ಪಂ. ಮುಖ್ಯಾಧಿಕಾರಿ ನಾಗೇಂದ್ರಕುಮಾರ್ ಅವರಿಗೆ ಸೂಚಿಸಿದರು.
ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ಒದಗಿಸಬೇಕು. ಶಿಕ್ಷಕರು ನಿಲಯದ ವಸತಿಗಳಲ್ಲೇ ನೆಲೆಸಬೇಕು. ನಿಯಮಿತವಾಗಿ ತರಗತಿ ಚಟುವಟಿಕೆಗಳನ್ನು ತೆಗೆದುಕೊಂಡು ಎಲ್ಲ ವಸತಿ ನಿಲಯಗಳಲ್ಲಿ ಎಸ್‌ಎಸ್‌ಎಲ್ ಸಿ ಫಲಿತಾಂಶ ಉತ್ತಮ ಪಡಿಸಬೇಕು ಎಂದು ಮುಖಂಡ ಬರಗೂರು ರವಿ ಸಭೆಯಲ್ಲಿ ಒತ್ತಾಯಿಸಿದರು.
ಈ ಕುರಿತು ತಹಶೀಲ್ದಾರ್ ಸೌಮ್ಯ ಅವರು ವಸತಿ ನಿಲಯಗಳ ಪ್ರಾಂಶುಪಾಲರಿಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ತಾಕೀತು ಮಾಡಿದರು.
ತಾಲ್ಲೂಕಿನಾದ್ಯಂತ ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ತಡೆಗಟ್ಟಬೇಕು. ಪಟ್ಟಣದಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಬೇಕು. ದಲಿತರ ಕೇರಿಗಳಿಗೆ ರಸ್ತೆ, ಶುದ್ಧ ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ಗಣೇಶ್ ವೇಲಾಪುರಿ ಮಾತನಾಡಿ, ಕುಳುವಾಡಿಕೆ ಜಮೀನು ಸಾಗುವಳಿ ಮಾಡುತ್ತಿರುವ ದಲಿತ ಫಲಾನುಭವಿಗಳಿಗೆ ಸರ್ಕಾರ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಶಿರಸ್ತೇದಾರ್ ಸೋಮಶೇಖರ್, ನರೇಗಾ ಯೋಜನಾಧಿಕಾರಿ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.