ಹಾಸನ : ಸ್ಕೌಟ್ಸ್ ಮತು ಗೈಡ್ಸ್ ರಾಜ್ಯ ಮಟ್ಟದ ಜಾಂಬೂರಿ ಕಾರ್ಯಕ್ರಮವನ್ನು ನಗರದಲ್ಲಿ ಜನವರಿಯಲ್ಲಿ ನಡೆಸಲು ರೂಪುರೇಷೆ ತಯಾರಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಕೌಟ್ಸ್ ಮತು ಗೈಡ್ಸ್ ರಾಜ್ಯ ಮಟ್ಟದ ಜಾಂಬೂರಿ ಆಯೋಜನೆ ಕುರಿತ ಸಭೆಯಲ್ಲಿ ಮಾತನಾಡಿದರು.
‘ಒಂದು ವಾರ ಜರುಗುವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂದಾಜು 12 ಸಾವಿರ ಮಕ್ಕಳು, ಶಿಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಸತಿ, ಆಹಾರ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಕರಕುಶಲ ವಸ್ತು ಪ್ರದರ್ಶನ ಮಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಸ ಚಟುವಟಿಕೆಗಳ ಆಯೋಜಿಸುವಂತೆ’ ಅಧಿಕಾರಿಗಳಿಗೆ ಸೂಚಿಸಿದರು.
ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ನಗರಸಭೆ ಆಯುಕ್ತರು, ಜಿಲ್ಲಾ ಪಂಚಾಯಿತಿ ಡಿ.ಆರ್.ಡಿ.ಎ.ಕೋಶದ ಯೋಜನಾ ನಿರ್ದೇಶಕರು, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ, ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ತಹಶೀಲ್ದಾರ್ ಹಾಗೂ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥರನ್ನೋಳಗೊಂಡ ತಂಡ ರಚಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ, ಪ್ರಕಾಶ್ ಎಸ್.ಯಾಜಿ, ಎಂ.ಬಿ.ಗಿರಿಜಾಂಬಿಕ, ಉಪಾಧ್ಯಕ್ಷ ಸುರೇಶ್ ಗುರೂಜಿ, ರೇಣುಕ ಪ್ರಭು, ಜಯ ಕುಮಾರ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ಡಿ.ನಾರಾಯಣ, ಜಂಟಿ ಕಾರ್ಯದರ್ಶಿ ಕಾಂಚನಮಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.