ADVERTISEMENT

ಆಯುಷ್ಮಾನ್ ಯೋಜನೆ ಅನುಷ್ಠಾನ: ಹಿಮ್ಸ್‌ಗೆ ದ್ವಿತೀಯ ರ‍್ಯಾಂಕ್

ಆಯುಷ್ಮಾನ್ ಯೋಜನೆ ಅನುಷ್ಠಾನ: ಹಿಮ್ಸ್‌ಗೆ ದ್ವಿತೀಯ ರ‍್ಯಾಂಕ್ ಮೈಸೂರಿಗೆ 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 15:11 IST
Last Updated 28 ಆಗಸ್ಟ್ 2021, 15:11 IST
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.   

ಹಾಸನ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ (ಎಬಿಎಆರ್‌ಕೆ) ಅನುಷ್ಠಾನದಲ್ಲಿ ಹಾಸನ
ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ರಾಜ್ಯದಲ್ಲೇ ದ್ವಿತೀಯ ರ‍್ಯಾಂಕ್ ಪಡೆದಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮೊದಲ ರ‍್ಯಾಂಕ್ ಪಡೆದಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆ ಮೂರನೇ ಸ್ಥಾನ ಪಡೆದುಕೊಂಡಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು ಎರಡು ಸಾವಿರ ಹಾಸಿಗೆಗಳಿವೆ. ಆದರೆ,ಹಿಮ್ಸ್‌ನಲ್ಲಿ 700 ಹಾಸಿಗೆಗಳಿದ್ದರೂ, ಹೆಚ್ಚು ರೋಗಿಗಳಿಗೆ ಎಬಿಎಆರ್‌ಕೆ ಚಿಕಿತ್ಸೆ ನೀಡುವ ಮೂಲಕಉತ್ತಮ ಸಾಧನೆ ಮಾಡಿರುವುದು ಗಮನಾರ್ಹ ಸಾಧನೆಯಾಗಿದೆ. ಮೈಸೂರಿನಲ್ಲಿ 1,500 ಹಾಸಿಗೆಗಳಿದ್ದರೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕಳೆದ ಏಪ್ರಿಲ್ 21ರಿಂದ ಜುಲೈ 21 ರ ವರೆಗೆ ಹಿಮ್ಸ್ ಆಸ್ಪತ್ರೆಯಲ್ಲಿ ಕಡಿಮೆ ಹಾಸಿಗೆಗಳಿದ್ದರೂ ಹೆಚ್ಚು
ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಅವಧಿಯಲ್ಲಿ 3075 ಕೋವಿಡ್ ಪೀಡಿತರಿಗೆ, 1794 ಕೋವಿಡೇತರ ರೋಗಿಗಳು ಸೇರಿ 4869 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಕಿಮ್ಸ್‌ನಲ್ಲಿ ಕ್ರಮವಾಗಿ1817 ಮತ್ತು 3078 ಸೇರಿ 4895 ರೋಗಿಗಳಿಗೆ ಚಿಕಿತ್ಸೆ ಒದಗಿಸಿದ್ದರೆ,ಮೈಸೂರಿನಲ್ಲಿ 803 ಹಾಗೂ 2086 ರೋಗಿಗಳು ಸೇರಿ ಒಟ್ಟು 2892 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಏಪ್ರಿಲ್-ಜುಲೈ ನಡುವಿನ ಹೋಲಿಕೆಯಲ್ಲಿ ಹಿಮ್ಸ್ ಸಾಧನೆ 2750 ಇದ್ದರೆ ಕಿಮ್ಸ್ 2500 ಮತ್ತು ಮೈಸೂರು 755 ಇದೆ.

ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಮಾತನಾಡಿ, ‘ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ನೀಡಿರುವ ಚಿಕಿತ್ಸೆ ಅನುಪಾತ ಆಧರಿಸಿ ರ‍್ಯಾಂಕಿಂಗ್ ನೀಡಲಾಗಿದೆ. ಹಿಮ್ಸ್‌ನಲ್ಲಿ ಹಾಸಿಗೆಸಂಖ್ಯೆ ಕಡಿಮೆ ಇದ್ದರೂ, ಉತ್ತಮ ಸಾಧನೆ ಮಾಡಿರುವ ತೃಪ್ತಿ ಇದೆ.ಹೆಚ್ಚು ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಅನುಕೂಲ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ತಿಳಿಸಿದರು.

‘ಈ ಹಿಂದೆ ಸಂಸ್ಥೆಯ ವಿದ್ಯಾರ್ಥಿಗಳು ಹೋಂ ಐಸೋಲೇಶನ್ ನಲ್ಲಿರುವವರ ಕೌನ್ಸೆಲಿಂಗ್‌ನಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರು. ಹಿಮ್ಸ್‌ಗೆ ಸಿಕ್ಕಿರುವ ಈ ರ‍್ಯಾಂಕ್‌ನಿಂದ ಅನೇಕ ಅನುಕೂಲಗಳಾಗಿವೆ.ಎಬಿಎಆರ್‌ಕೆ ಯೋಜನೆಯಡಿ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ಹಾಗೂ ನಾನಾ ರೀತಿಯ ಉಪಯೋಗ ಕಲ್ಪಿಸಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೂಢೀಕರಣವೂ ಸಾಧ್ಯವಾಗಿದೆ. ಹೀಗೆ ಲಭ್ಯವಾದ ಅನುದಾನವನ್ನು ಬೇರೆ ಬೇರೆ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಬಹುದಾಗಿದೆ ’ ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.