ADVERTISEMENT

ಶಾಂತಲಾ ಮಹೋತ್ಸವ: ವೈಭವದ ಮೆರವಣಿಗೆಗೆ ಮನಸೋತ ಜನ

ಶಾಂತಲಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ: ಕಲಾತಂಡ ಸೊಬಗು ಕಣ್ತುಂಬಿಕೊಂಡ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 3:20 IST
Last Updated 23 ಡಿಸೆಂಬರ್ 2025, 3:20 IST
ಹಳೇಬೀಡಿನಲ್ಲಿ ಸೋಮವಾರ ಸಂಜೆ ನಡೆದ ಶಾಂತಲಾ ಉತ್ಸವದ ಮೆರವಣಿಗೆಯಲ್ಲಿ ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬೆಳ್ಳಿರಥದಲ್ಲಿ ಆರೋಹಣ ಮಾಡಲಾಗಿತ್ತು
ಹಳೇಬೀಡಿನಲ್ಲಿ ಸೋಮವಾರ ಸಂಜೆ ನಡೆದ ಶಾಂತಲಾ ಉತ್ಸವದ ಮೆರವಣಿಗೆಯಲ್ಲಿ ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬೆಳ್ಳಿರಥದಲ್ಲಿ ಆರೋಹಣ ಮಾಡಲಾಗಿತ್ತು   

ಹಳೇಬೀಡು: ವಿವಿಧೆಡೆಯಿಂದ ಬಂದಿದ್ದ ಕಲಾ ತಂಡಗಳ ನೃತ್ಯ, ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ವಿವಿಧ ಊರುಗಳಿಂದ ಬಂದಿದ್ದ ಕಲಾ ಪ್ರೇಮಿಗಳು ಸಂಭ್ರಮದಿಂದ ಮೆರವಣಿಗೆ ವೀಕ್ಷಿಸಿ ಹೊಯ್ಸಳ ನಾಡಿನ ಪ್ರೀತಿ ಮೆರೆದರು.

ಗಾರುಡಿಗ ಗೊಂಬೆ, ಜೋಕರ್ ಗೊಂಬೆ, ಡೊಳ್ಳು ಕುಣಿತ, ಚೆಂಡೆ ವಾದನ, ನಂದಿ ಧ್ವಜ ಕುಣಿತ ಮೊದಲಾದ ಜನಪದ ಸೊಗಡಿನ ಮೆರವಣಿಗೆಯಲ್ಲಿ ಸಾಗಿದ ಕಲಾ ತಂಡಗಳು ವಿವಿಧ ಕಲಾಪ್ರಕಾರಗಳ ಪ್ರದರ್ಶನದೊಂದಿಗೆ ಇಕ್ಕೆಲಗಳಲ್ಲಿ ವೀಕ್ಷಿಸುತ್ತಿದ್ದ ಜನರ ಮನ ಸೆಳೆದವು.

ರಾಜಗೆರೆ ಶಿವಣ್ಣ ಅವರ ಹೊಯ್ಸಳ ತಂಡ, ಅರಸೀಕೆರೆ ಬೋರನಹಳ್ಳಿಯ ಶ್ರೀರಾಮ ಯುವಕ ಸಂಘದ ಗೊಂಬೆ ಕುಣಿತ ಮನಮೋಹಕವಾಗಿ ಮೂಡಿ ಬಂತು. ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಜೋಡಿ ನಂದಿ ಧ್ವಜ ಕುಣಿತ ಭಕ್ತಿ ಭಾವ ಮೂಡಿಸುವಂತಿತ್ತು.

ADVERTISEMENT

ಬೇಲೂರಿನ ಟೀಂ ಅಭಿಮನ್ಯು ತಂಡದವರ ಡೊಳ್ಳಿನ ನಾದ ಕಿವಿಗೆ ಅಪ್ಪಳಿಸುವಂತೆ ಕೇಳಿ ಬರುತ್ತಿತ್ತು. ಕಲ್ಪತರು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೊಯ್ಸಳ ಸಾಮ್ರಾಜ್ಯ ಸ್ಥಾಪನೆಯ ಸ್ತಬ್ಧ ಚಿತ್ರದಲ್ಲಿ ಸುದತ್ತಾಚಾರ್ಯ, ಸಳ ಮಹಾರಾಜ ಹಾಗೂ ಪರಿವಾರ ವೇಷ ಧರಿಸಿ ಮೆರವಣಿಗೆಯಲ್ಲಿ ದೇಶಭಕ್ತಿ ಮೆರೆದರು.

ಮಂಗಳೂರು ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಲಯಬದ್ಧವಾಗಿ ಚೆಂಡೆ ಬಡಿಯುತ್ತಾ ವೀಕ್ಷಕರ ಮನ ತಣಿಸಿದರು. ಬೆಳ್ಳಿ ರಥದಲ್ಲಿ ಪುಷ್ಪಗಿರಿ ಸ್ವಾಮೀಜಿ ಅವರನ್ನು ಕೂರಿಸಲಾಗಿತ್ತು. ಬೇಲೂರಿನ ಮಹೇಶಗೌಡ, ಕೆಂಪೇಗೌಡರ ವೇಷ ಧರಿಸಿ ಅಶ್ವಾರೂಢರಾಗಿ ರಾಜಗಾಂಭೀರ್ಯ ಮೆರೆದರು. ಹಗರೆ ಗ್ರಾಮದ ಸಾಲುಮರದ ಸದಾಶಿವಯ್ಯ ಅಶ್ವಾರೂಢ ಬಸವೇಶ್ವರ ವೇಷಧರಿಸಿ ಭಕ್ತಿ ಭಾವ ಮೆರೆದರು.

ಪುಷ್ಪಗಿರಿ ಗ್ರಾಮಾಭಿವೃದ್ಧಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಕಲಾ ತಂಡಗಳ ಮೆರವಣಿಗೆ ನಾಡಿನ ಕಲೆ ಸಂಸ್ಕೃತಿ ಅನಾವರಣಗೊಳಿಸಿತು. ನಾಸಿಕ್ ಡೋಲ್ ಬಡಿತದ ಶಬ್ದಕ್ಕೆ ಯುವಕರು ಹೆಜ್ಜೆ ಹಾಕಿದರು. ಸಂಗೀತಮಯವಾದ ವಾದ್ಯಗಳ ಇಂಪಾದ ನಾದಕ್ಕೆ ಹಿರಿಯರು ತಲೆದೂಗಿದರು. ಬೀದಿ ಬೀದಿಗಳಲ್ಲಿ ಜನಪದ ಸೊಗಡಿನ ಕನ್ನಡ ಕಹಳೆ ಮೊಳಗಿತು.

ಕಲಾ ತಂಡ ಹಾಗೂ ವೇಷ ಭೂಷಣ ಧರಿಸಿದ್ದ ಕಲಾವಿದರೊಂದಿಗೆ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕಲಾ ಪ್ರೇಮಿಗಳಿಗೆ ಕಲಾ ತಂಡಗಳು ಸಾಂಸ್ಕೃತಿಕ ರಸದೌತಣ ನೀಡಿದವು. ಕಲ್ಪತರು ಶಾಲೆ ಆವರಣದಿಂದ ಆರಂಭವಾದ ಮೆರವಣಿಗೆ ಬೇಲೂರು ರಸ್ತೆ, ಹೊಯ್ಸಳ ರಸ್ತೆ ಹಾಗೂ ರಸ್ತೆ ಮೂಲಕ ಕೆಪಿಎಸ್ ಶಾಲೆ ಆವರಣಕ್ಕೆ ತಲುಪಿತು.

ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗ್ರಾನೈಟ್ ರಾಜಶೇಖರ್, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎಂ.ಕೆ.ಹುಲೀಗೌಡ, ಮುಖಂಡರಾದ ಮಲ್ಲಿಕಾರ್ಜುನ, ಶಿವಲಿಂಗೇಗೌಡ ಪಾಲ್ಗೊಂಡಿದ್ದರು.

ಹಳೇಬೀಡಿನಲ್ಲಿ ಸೋಮವಾರ ಸಂಜೆ ನಡೆದ ಶಾಂತಲಾ ಉತ್ಸವದ ಮೆರವಣಿಗೆಯಲ್ಲಿ ರಾಜಗೆರೆ ಶಿವಣ್ಣ ಅವರ ಜೋಕರ್ ಗೊಂಬೆ ತಂಡ ಭಾಗವಹಿಸಿತ್ತು
ಹಳೇಬೀಡಿನಲ್ಲಿ ಸೋಮವಾರ ಸಂಜೆ ನಡೆದ ಶಾಂತಲಾ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅರಸೀಕೆರೆ ಬೋರನಹಳ್ಳಿ ಶ್ರೀರಾಮ ಸಂಘದ ಗಾರುಡಿಗ ಗೊಂಬೆ ವೇಷಧಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.