ಸಕಲೇಶಪುರ: ತಾಲ್ಲೂಕಿನಲ್ಲಿ ಹಾದು ಹೋಗಿರುವ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಶನಿವಾರ ರಾತ್ರಿಯಿಡಿ ವಾಹನ ಪ್ರಯಾಣಿಕರು ಪರದಾಡುವಂತಾಯಿತು. ನಿರಂತರ ಮಳೆಯಿಂದ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ರಾತ್ರಿ ವೇಳೆ ಕೆಲ ಗಂಟೆಗಳವರೆಗೆ ವಾಹನ ಸಂಚಾರ ಸ್ಥಗಿತವಾಗಿತ್ತು.
ತಾಲ್ಲೂಕಿನಾದ್ಯಂತ ಶನಿವಾರ ಹಾಗೂ ಭಾನುವಾರ ಬಿಡುವಿಲ್ದೇದೆ ಧಾರಾಕಾರವಾಗಿ ಸುರಿದ ಮಳೆಯಿಂದ ಶಿರಾಡಿ ಘಾಟ್‌ನಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿದು ಶನಿವಾರ ಸಂಜೆಯಿಂದ ಭಾನುವಾರ ಬೆಳಿಗ್ಗೆ 2.30 ರವರೆಗೆ ಹಾಗೂ ಭಾನುವಾರ ಮಧ್ಯಾಹ್ನ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಮಾರನಹಳ್ಳಿಯಿಂದ ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನ ನಡುವೆ ಗುಡ್ಡಕುಸಿತದಿಂದ ಮಣ್ಣು ಹಾಗೂ ಮರಗಳು ರಸ್ತೆಯ ಬಿದ್ದಿದ್ದವು. ಹತ್ತಾರು ಲೋಡ್‌ನಷ್ಟು ಮಣ್ಣು ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಉಪ ವಿಭಾಗಾಧಿಕಾರಿ ಎಚ್.ಡಿ. ರಾಜೇಶ್, ವಲಯ ಅರಣ್ಯ ಅಧಿಕಾರಿ ಎಚ್.ಆರ್. ಹೇಮಂತ್‌ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ನಿರಂಜನ್, ಪಿಎಸ್‌ಐ ಪ್ರಸನ್ನಕುಮಾರ್, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಅನೀಸ್, ಸೇರಿದಂತೆ ಕಂದಾಯ, ಪೊಲೀಸ್, ಅರಣ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಸಂಜೆ 6 ರಿಂದ ಭಾನುವಾರ ಮುಂಜಾನೆ 2.30ರವರೆಗೂ ಮಳೆಯಲ್ಲಿಯೇ ನಿಂತು ತೆರವು ಕಾರ್ಯಾಚರಣೆ ಮಾಡಿಸಿದರು.
ಯಂತ್ರಗಳ ಮೂಲಕ ಮಣ್ಣು ತೆರವುಗೊಳಿಸುತ್ತಿದ್ದಂತೆ ಮಳೆ ನೀರಿನೊಂದಿಗೆ ಮತ್ತೆ ಗುಡ್ಡದ ಮೇಲಿಂದ ಮಣ್ಣು ಜಾರುತ್ತಲೇ ಇದ್ದುದರಿಂದ ತೆರವು ಕಾರ್ಯಾಚರಣೆ ಮಾಡಲು ಹರಸಾಹಸ ಮಾಡಬೇಕಾಯಿತು. ಅದೇ ಪ್ರದೇಶದಲ್ಲಿ ಕಾರಿನ ಮೇಲೆ ಗುಡ್ಡದ ಮಣ್ಣು ಕುಸಿದು ಕಾರು ಜಖಂಗೊಂಡಿತ್ತು. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ.
ಭಾನುವಾರ ಮಧ್ಯಾಹ್ನ ಶಿರಾಡಿ ಘಾಟ್ ಡಬಲ್ ಟರ್ನ್ ಸಮೀಪ ಪುನಃ ಹೆದ್ದಾರಿ ಮೇಲೆ ಗುಡ್ಡದಿಂದ ಮಣ್ಣು ಹಾಗೂ ಮರಗಳು ಬಿದ್ದಿದ್ದು, ಎರಡು ಗಂಟೆಗಳ ಕಾಲ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಚ್.ಡಿ. ರಾಜೇಶ್, ತಹಶೀಲ್ದಾರ್ ಕೆ.ಎಸ್. ಸುಪ್ರೀತಾ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ತ್ವರಿತವಾಗಿ ಮಣ್ಣು ಹಾಗೂ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಡಗರವಳ್ಳಿ–ಹಿರದನಹಳ್ಳಿ ನಡುವಿನ ರಸ್ತೆಗೆ ಭಾನುವಾರ ಅಡ್ಡಲಾಗಿ ಬಿದ್ದಿದ್ದ ಮರವನ್ನು ವಲಯ ಅರಣ್ಯ ಅಧಿಕಾರಿ ಎಚ್.ಆರ್. ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿ ತೆರವುಗೊಳಿಸಿದರು.
ಎರಡು ದಿನಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು ಗಾಳಿ ಬೀಸುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿದ್ದು ತುರ್ತು ಕಾರ್ಯಾಚರಣೆಗೆ ಸಿದ್ದರಿರಲು ಸೂಚನೆ ನೀಡಲಾಗಿದೆ.ಕೆ.ಎಸ್. ಸುಪ್ರೀತಾ ತಹಶೀಲ್ದಾರ್
ಶನಿವಾರ ಸಂಜೆ 6 ರಿಂದ ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಶ್ಚಿಮಘಟ್ಟದ ಅಂಚಿನಲ್ಲಿರುವ ಹೊಂಗಡಹಳ್ಳ ಬಿಸಿಲೆ ಕಾಡುಮನೆ ಮಾರನಹಳ್ಳಿ ದೇವಾಲದಕೆರೆ ಹಾನುಬಾಳು ಸುತ್ತಲಿನ ಪ್ರದೇಶಗಳಲ್ಲಿ ಸರಾಸರಿ 18 ಸೆಂ.ಮೀ. ಮಳೆಯಾಗಿದೆ. ಜಾನೇಕೆರೆ ಶುಕ್ರವಾರಸಂತೆ ಕ್ಯಾನಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ 14 ಸೆಂ.ಮೀ. ಮಳೆಯಾಗಿದೆ. ಅತಿಯಾಗಿ ಸುರಿದ ಮಳೆಯಿಂದ ಐಗೂರು ಹೊಳೆ ಜಾನೇಕೆರೆ ಕಿರುಹಳ್ಳ ಬೇಣಗಿನ ಹಳ್ಳ ಜಪಾವತಿ ಹಳ್ಳ ಎತ್ತಿನಹಳ್ಳ ಸೇರಿದಂತೆ ಬಹುತೇಕ ನದಿ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಹೇಮಾವತಿ ಒಳಹರಿವು ಹೆಚ್ಚಾಗಿದ್ದು ನದಿ ಪಾತ್ರದ ತೆಗ್ಗು ಪ್ರದೇಶಗಳು ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಮಠಸಾಗರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಕಿರುಹಳ್ಳ ಸೇತುವೆ ಮೇಲೆ ಉಕ್ಕಿ ಹರಿದ ಪರಿಣಾಮ ಭಾನುವಾರ ಮಧ್ಯಾಹ್ನದವರೆಗೂ ಸಂಚಾರ ಬಂದ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.