ADVERTISEMENT

ಜೆಡಿಎಸ್ ತ್ಯಜಿಸುವರೇ ಶಿವಲಿಂಗೇಗೌಡ?

ಪಕ್ಷದ ಕಾರ್ಯಕ್ರಮದಿಂದ ದೂರ ಉಳಿದ ಅರಸೀಕೆರೆ ಶಾಸಕ

ಕೆ.ಎಸ್.ಸುನಿಲ್
Published 21 ಏಪ್ರಿಲ್ 2022, 19:30 IST
Last Updated 21 ಏಪ್ರಿಲ್ 2022, 19:30 IST
ಕೆ.ಎಂ. ಶಿವಲಿಂಗೇಗೌಡ
ಕೆ.ಎಂ. ಶಿವಲಿಂಗೇಗೌಡ   

ಹಾಸನ: ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆಮಾಡಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್‌ ಪಕ್ಷತೊರೆಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಲವು ತಿಂಗಳಿಂದ ಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸುಹರಿದಾಡುತ್ತಿತ್ತು. ಅನೇಕ ಬಾರಿ ಸಿದ್ದರಾಮಯ್ಯ ಅವರ ಜೊತೆ ಕಾಣಿಸಿಕೊಂಡು,ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ ಹೊಗಳುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದ ಶಿವಲಿಂಗೇಗೌಡರು, ಜಿಲ್ಲೆಯಲ್ಲಿ ಜಲಧಾರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಗುರುವಾರ ನಗರದಲ್ಲಿ ನಡೆದ ಜಲಧಾರೆ ಸಮಾವೇಶದಿಂದಲೂ ಹೊರಗುಳಿಯುವ ಮೂಲಕ ಪಕ್ಷ ತೊರೆಯುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಆದರೆ, ಕಳೆದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿನಡೆದ ಸಭೆಗೆ ನಾಯಕರು ಸರಿಯಾದ ಮಾಹಿತಿ ನೀಡಿಲ್ಲ ಎಂದು ದೇವೇಗೌಡರಎದುರೇ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ADVERTISEMENT

ತಮ್ಮ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ದೇವಾಲಯ ಉದ್ಘಾಟನಾಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ್ದಕುಮಾರಸ್ವಾಮಿ, ‘ನಮ್ಮ ಸರ್ಕಾರ ಬಂದರೆ ವಿಶೇಷ ಆಸಕ್ತಿ ವಹಿಸಿ ಮಂತ್ರಿಮಾಡುವೆ’ ಎಂದು ಭರವಸೆ ನೀಡಿದ್ದರು.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಹಾಸನದಿಂದಲೂ ಬಿಜೆಪಿ–ಜೆಡಿಎಸ್‍ನಿಂದ ಕೆಲವರು ಕಾಂಗ್ರೆಸ್ ಬರುತ್ತಾರೆ ಎಂದಿದ್ದರು. ಶಿವಲಿಂಗೇಗೌಡರು ಸಮಾವೇಶಕ್ಕೆ ಗೈರಾಗಿರುವುದನ್ನು ಗಮನಿಸಿದರೆ ಅವರು ಕೈ ಹಿಡಿಯುತ್ತಾರೆ ಎನ್ನಲಾಗಿದೆ.

ಈ ಬೆಳವಣಿಗೆ ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದ ಶಿವಲಿಂಗೇಗೌಡ,‘ರೇವಣ್ಣ ಅವರನ್ನು ಭೇಟಿ ಮಾಡಿ ಎರಡುತಿಂಗಳ ನಂತರ ಮಾತನಾಡುವೆ, ಸಭೆಗೆ ಬರುವುದಿಲ್ಲ ಎಂದು ಹೇಳಿ ಬಂದಿದ್ದೆ. ಅವರು ಏನು ಹೇಳಿದ್ರೋ ಗೊತ್ತಿಲ್ಲ. ಅವರು ಡ್ರಾಮಾ ಆಡಿದ್ದಾರೋ, ನಾನು ಆಡಿದ್ದೀನೋ ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಯಾವ ಡ್ರಾಮಾನೂ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿದ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಮಾತು ಆಡಿರಬಹುದು. ಯಾಕೆ ಹೀಗೆ ಮಾತಾಡಿದ್ದೀರಾ, ನಾನು ಏನು ಡ್ರಾಮಾ ಮಾಡಿದ್ದೀನಿ ಎಂದು ಕೇಳುತ್ತೇನೆ. ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿ ಇಲ್ಲ. ಅವರು ಹೀಗೆಲ್ಲಾ ಮಾತಾಡಿದ ಮೇಲೆ ಮುಂದೆ ಏನು ಮಾಡಬೇಕು ಎಂಬುದನ್ನು ಕಾರ್ಯಕರ್ತರ ಬಳಿ ಕೇಳುವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.