ADVERTISEMENT

ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ: ಕೆಂಕೆರೆಯಲ್ಲಿ ಶಿವಲಿಂಗೇಗೌಡ ಸವಾಲು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:31 IST
Last Updated 13 ಜನವರಿ 2026, 5:31 IST
ಗಂಡಸಿ ಹೋಬಳಿಯ ಕೆಂಕೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭದಲ್ಲಿ ಕೇಕ್ ಕತ್ತರಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಾರ್ಯಕರ್ತರಿಗೆ ತಿನ್ನಿಸಿದರು
ಗಂಡಸಿ ಹೋಬಳಿಯ ಕೆಂಕೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭದಲ್ಲಿ ಕೇಕ್ ಕತ್ತರಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಾರ್ಯಕರ್ತರಿಗೆ ತಿನ್ನಿಸಿದರು   

ಗಂಡಸಿ: ಘಟಾನುಘಟಿ ನಾಯಕರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸತತ ನಾಲ್ಕು ಬಾರಿ ಅರಸೀಕೆರೆ ಕ್ಷೇತ್ರದಿಂದ ಗೆಲುವು ಸಾಧಿಸಿರುವ ನಾನು ಕ್ಷೇತ್ರದ ಮತದಾರರ ನಾಡಿಮಿಡಿತ ಬಲ್ಲೆ. ಕ್ಷೇತ್ರಕ್ಕೆ ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಮತ ಹಾಕುತ್ತಾರೆ. ಸುಳ್ಳು ಭರವಸೆ ನೀಡುವವರನ್ನು ತಿರಸ್ಕರಿಸಲಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕನಕದಾಸರ ಪುತ್ಥಳಿಕೆಗೆ ಮಾಲಾರ್ಪಣೆ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆ ಅಖಾಡಕ್ಕೆ ಧುಮುಕಲು ನಾನು ಸಿದ್ಧ. ತಾಕತ್ತಿದ್ದರೆ ನೀವು ಧುಮುಕಿ. ಅರಸೀಕೆರೆ ಕ್ಷೇತ್ರದ ಮತದಾರರು ಅಭಿವೃದ್ಧಿಗೆ ಮತ ಹಾಕುತ್ತಾರೋ ಅಥವಾ ಸುಳ್ಳು ಭರವಸೆ ನೀಡುವವರಿಗೆ ಮತ ಹಾಕುತ್ತಾರೋ ಚುನಾವಣಾ ಕಣದಿಂದಲೇ ಬಹಿರಂಗವಾಗಲಿ ಎಂದು ಸವಾಲು ಹಾಕಿದರು.

ADVERTISEMENT

ಸಿದ್ದರಾಮಯ್ಯನವರ ಅಭಿನಂದನ ಸಮಾರಂಭ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ಅಭಿನಂದನಾ ಸಮಾರಂಭಗಳು, ಭಾರಿ ಜನಸ್ತೋಮದೊಂದಿಗೆ ನಡೆಯುತ್ತಿವೆ. ಶೋಷಿತ ವರ್ಗಗಳ ಅಭಿವೃದ್ಧಿಯ ಹರಿಕಾರ, ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿರುವುದು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಲಿದೆ ಎಂದರು.

ತಾಲ್ಲೂಕಿನ ಬಾಗೇಶಪುರ, ಗಂಡಸಿ ಹ್ಯಾಂಡ್ ಪೋಸ್ಟ್, ದೊಡ್ಡ ಮೇಟಿಕುರ್ಕಿಯಲ್ಲಿ ಅತಿ ಶೀಘ್ರದಲ್ಲಿ ಕೆಪಿಎಸ್ ಶಾಲೆಗಳು ಪ್ರಾರಂಭವಾಗಲಿವೆ. ₹150 ಕೋಟಿ ವೆಚ್ಚದಲ್ಲಿ ಗಂಡಸಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಕರೆಸಿ ಅದ್ದೂರಿ ಸಮಾರಂಭ ಆಯೋಜಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಜಿ.ಪಂ.ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ, ಎಪಿಎಂಸಿ ಮಾಜಿ ಸದಸ್ಯರಾದ ಮಲ್ಲಾಪುರ ಮಂಜುರಾಜ್, ಎಚ್.ಕೆ. ಹಳ್ಳಿ ರಾಮಚಂದ್ರು, ಯರಗನಾಳು ಮಲ್ಲೇಶ್, ಚಗಚಗೆರೆ ಈಶ್ವರಪ್ಪ, ವಕೀಲ ಕುಮಾರ್, ಕೆಂಕೆರೆ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು, ಕುರುಬ ಸಮಾಜದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.