ADVERTISEMENT

ಶಿವಮೊಗ್ಗ ಯಡಿಯೂರಪ್ಪ ಮಕ್ಕಳಿಗೆ ಬರೆದು ಕೊಟ್ಟಿದ್ದಾರಾ:ಎಚ್‌.ಡಿ.ರೇವಣ್ಣ ವಾಗ್ದಾಳಿ

ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 12:16 IST
Last Updated 7 ಮಾರ್ಚ್ 2019, 12:16 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಸಚಿವ ಹೆಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.

ಹೊಳೆನರಸೀಪುರ ತಾಲ್ಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ನಾಲ್ಕು ಮುಕ್ಕಾಲು ವರ್ಷದಲ್ಲಿ ರಾಜ್ಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಇಂಥವರಿಗೆ ಜೆಡಿಎಸ್‌ ನಾಯಕರ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು’ ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಇತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ದೇವೇಗೌಡರು ಸಂಸದರಾಗಿ ಸುಮ್ಮನೆ ಸುತ್ತಾಡಿಕೊಂಡಿಲ್ಲ. ಅನೇಕ ಅಭಿವೃದ್ಧಿ ಮಾಡಿದ್ದಾರೆ. ಆಗ ಶ್ರೀನಿವಾಸ್ ಪ್ರಸಾದ್ ಇದ್ದರೆ’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಕರ್ನಾಟಕ ದೇವೇಗೌಡರ ಆಸ್ತಿಯೇ’ ಎಂಬ ಟೀಕೆಗೆ ಗರಂ ಆದ ರೇವಣ್ಣ, ‘ಆ ರೀತಿ ಮಾತನಾಡುವವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಹಾಗಿದ್ರೆ ಶಿವಮೊಗ್ಗವನ್ನು ಯಡಿಯೂರಪ್ಪ ಹಾಗೂ ಅವರ ಮಕ್ಕಳಿಗೆ ಬರೆದು ಕೊಟ್ಟಿದ್ದಾರಾ’ ಎಂದು ಪ್ರಶ್ನಿಸಿದರು.

‘ರಾಜ್ಯದ ಜನ ನಮಗೆ ಬಾಂಡೆಡ್ ಲೇಬರ್ ಎಂದುಕೊಂಡಿದ್ದಾರೆ ಬಿಜೆಪಿಯವರು. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದ ರೇವಣ್ಣ, ‘18 ಜನ ಸಂಸದರು ಇದ್ದುಕೊಂಡು ನಾಡಿನ ಪರ ಯಾವ ಹೋರಾಟ ಮಾಡಿದ್ದಾರೆ? ದೇವೇಗೌಡರು, ಕುಮಾರಸ್ವಾಮಿ ಅಧಿಕಾರದಲ್ಲಿದ್ದು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ಚರ್ಚೆಗೆ ಬರಲಿ’ ಎಂದು ಬಹಿರಂಗ ಸವಾಲು ಹಾಕಿದರು.

‘ಸಂಸ್ಕೃತಿ ಇಲ್ಲದವರ ಬಗ್ಗೆ ನಾನು ಮಾತನಾಡಲ್ಲ. ರೈತರ ಸಾಲ ಮನ್ನಾ ಮಾಡದ ಬಿಜೆಪಿಯವರಿಗೆ ದೇವರೇ ಬುದ್ಧಿ ಕಲಿಸುವ ಕಾಲ ಬರಲಿದೆ’ ಎಂದರು.

ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ದೇವೇಗೌಡ, ರಾಹುಲ್ ಗಾಂಧಿ ಮಾತನಾಡಿದ್ದು, ಶೀಘ್ರ ಒಮ್ಮತದ ನಿರ್ಧಾರ ಹೊರ ಬೀಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.