ಶ್ರವಣಬೆಳಗೊಳ: ಪ್ರಾಚೀನ ಮತ್ತು ಐತಿಹಾಸಿಕ ಕ್ಷೇತ್ರವಾದ ಶ್ರವಣಬೆಳಗೊಳವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಕ್ಷೇತ್ರದ ಚಾವುಂಡರಾಯ ಸಭಾ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ವರ್ಷಾಯೋಗ ಚಾತುರ್ಮಾಸ್ಯ ಮಂಗಲ ಕಲಶ ಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಿಗಂಬರ ಜೈನಾಚಾರ್ಯರು ತ್ಯಾಗಿಗಳು, ಸರ್ವ ಜನರ, ಸಮಾಜದ, ಕಲ್ಯಾಣವಾಗಲೆಂದು ಎಲ್ಲವನ್ನೂ ತ್ಯಜಿಸಿದ ಮಹಾತ್ಮರಾಗಿದ್ದಾರೆ. ತ್ಯಾಗ ಸಂಯಮ, ಶಾಂತಿ, ವೈರಾಗ್ಯದ ಸಂದೇಶ ಸಾರುವ ಬಾಹುಬಲಿ ನೆಲೆಸಿರುವ ಈ ಪವಿತ್ರ ಕ್ಷೇತ್ರವು ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಜೈನ ಮಠದ ಬಸದಿಯ ಒಳಾಂಗಣದ ಸುತ್ತ ಗೋಡೆಯ ಮೇಲಿರುವ 1ಸಾವಿರ ವರ್ಷದ ಹಿಂದೆ ಬಿಡಿಸಿರುವ ವರ್ಣ ಚಿತ್ರಗಳು ಸುಂದರವಾಗಿದ್ದು, ಅವುಗಳ ಕಲಾ ರಚನೆಯನ್ನು ಸಂರಕ್ಷಣೆ ಮಾಡಲು ಇಲಾಖೆಗೆ ಸೂಚಿಸಿದ್ದೇನೆ. ಅದಕ್ಕೆ ಎಷ್ಟೇ ಖರ್ಚಾದರೂ ಸಹ ಇಲಾಖೆಯು ಹಣಕಾಸಿನ ನೆರವನ್ನು ಒದಗಿಸುವುದಾಗಿ ಹೇಳಿದರು.
ಕ್ಷೇತ್ರದ ಶ್ರೀಗಳು, ಶಾಸಕ ಸಿ.ಎನ್.ಬಾಲಕೃಷ್ಣ ಅವರು, 2030ರ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕಾರ್ಯಕ್ರಮ ರೂಪಿಸುತ್ತಿದ್ದು, ಯಾವುದೇ ಸರ್ಕಾರ ಇದ್ದರೂ ಅದಕ್ಕೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜೈನ ಕವಿಗಳ ಕೊಡುಗೆ ಅಮೂಲ್ಯ. ಪಂಪ, ರನ್ನ, ಪೊನ್ನ, ಜನ್ನ, ನಯಸೇನರ ಸಾಹಿತ್ಯವನ್ನು ಸ್ಮರಿಸಿದ ಅವರು, ರನ್ನ ಬೆಳೆಯಲಿಕ್ಕೆ ದಾನ ಚಿಂತಾಮಣಿ ಅತ್ತಿಮಬ್ಬೆಯ ಕೊಡುಗೆ ಅಸಾಧಾರಣವಾದದ್ದು ಎಂದು ಹೇಳಿದರು.
ವಿಂಧ್ಯಗಿರಿಯ ಬಾಹುಬಲಿ ಬೆಟ್ಟ ಮತ್ತು ಚಂದ್ರಗಿರಿಯ ಬೆಟ್ಟಗಳ ಸಂಪರ್ಕಕ್ಕೆ ರೋಪ್ ವೇ ಒದಗಿಸಲು ಸರ್ಕಾರ ಸಿದ್ಧವಿದ್ದು, ಆದಷ್ಟು ಬೇಗ ತಾಂತ್ರಿಕ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮೈಸೂರಿನ ಚಾಮುಂಡಿ ಬೆಟ್ಟ ಮತ್ತು ಎಲ್ಲಮ್ಮನ ಕ್ಷೇತ್ರದಂತೆ ಶ್ರವಣಬೆಳಗೊಳ ಕ್ಷೇತ್ರಕ್ಕೂ ಪ್ರಸಾದ ಯೋಜನೆ ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮನವಿ ಮಾಡಿದರು.
ಪುರಾತತ್ವ ಮತ್ತು ಸರ್ವೇಕ್ಷಣೆ ಇಲಾಖೆಯ ಅಧೀಕ್ಷಕ ಸುಜಿತ್ ನಯನ ಮಾತನಾಡಿ, ಬೆಂಗಳೂರು ವಲಯದಲ್ಲಿ 129 ಸಂರಕ್ಷಿತ ಸ್ಮಾರಕಗಳಿದ್ದು, ಅವುಗಳ ರಕ್ಷಣಾ ಕಾರ್ಯ ನಡೆಯುತ್ತಿದೆ. ಕ್ಷೇತ್ರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮಂಗಲ ವಾದ್ಯದೊಂದಿಗೆ ತ್ಯಾಗಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ವರ್ಷಾಯೋಗ ಚಾತುರ್ಮಾಸ್ಯದ ರಜತದ ಮಂಗಲ ಕಲಶದಲ್ಲಿ ಚಾರುಕೀರ್ತಿ ಶ್ರೀಗಳು ಮತ್ತು ಗಣ್ಯರು ಶ್ರೀಫಲ, ಮಂಗಲ ದ್ರವ್ಯಗಳನ್ನು ಹಾಕಿ ರಜತದ ತೆಂಗಿನಕಾಯಿಯನ್ನು ಮೇಲೆ ಇರಿಸಿದರು.
ಚಾತುರ್ಮಾಸ್ಯ ಕುರಿತು ಆಚಾರ್ಯ ಸುವಿಧಿ ಸಾಗರ ಮಹಾರಾಜರು, ವಿದ್ಯಾಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಸಾನಿಧ್ಯವನ್ನು ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ಸಂಗಸ್ಥ ತ್ಯಾಗಿಗಳು, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಸ್ವಾಮೀಜಿ ವಹಿಸಿದ್ದರು.
ಪುರಾತತ್ವ ಇಲಾಖೆ ಆಯುಕ್ತ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಸದಸ್ಯ ಎಸ್.ಬಿ.ಯಶಸ್, ಜೈನ ಸಮಾಜ ಮತ್ತು ಮಹಿಳಾ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.
ಕ್ಷೇತ್ರದ ವತಿಯಿಂದ ಸಚಿವ ಎಚ್.ಕೆ.ಪಾಟೀಲರಿಗೆ ಬೇಡಿಕೆಗಳ ಮನವಿ | ಎಲ್ಲಾ ತ್ಯಾಗಿಗಳಿಗೂ ಗಣ್ಯರಿಂದ ಶ್ರೀಫಲ ಸಮರ್ಪಣೆ
ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುತ್ತಿದ್ದು ಜೈನ ಮಠದ ಪಕ್ಕದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಚಾವುಂಡರಾಯ ಸಭಾ ಮಂಟಪಕ್ಕೆ ₹2 ಕೋಟಿ ಒದಗಿಸಲಾಗುವುದು.ಡಿ.ಸುಧಾಕರ್ ಸಚಿವ
ಈ ಬಾರಿ ಕ್ಷೇತ್ರದಲ್ಲಿ 39 ತ್ಯಾಗಿಗಳು ಚಾತುರ್ಮಾಸ್ಯ ಆಚರಿಸುತ್ತಿದ್ದು ಧರ್ಮ ಪ್ರಭಾವನೆಯಾಗಲಿದೆ. 4 ತಿಂಗಳೂ ದೇವ ಗುರು ಶಾಸ್ತ್ರಗಳ ಅಧ್ಯಯನ ಆಗಲಿದೆ.ಸ್ವಸ್ತೀಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ
ಬಡತನ ನಿರ್ಮೂಲನೆಯ ಕ್ರಾಂತಿ
‘ಈಗಾಗಲೇ ಕ್ರಾಂತಿ ಆಗುತ್ತಿದೆ. ಕರ್ನಾಟಕದಲ್ಲಿ ಬಡತನವನ್ನು ನಾವು ಬೇರು ಸಹಿತ ಕಿತ್ತಿದ್ದೇವೆ. ಯಾರಿದ್ದಾರೆ ಹೇಳಿ ಬಡವರು? ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ ಅಂದರೆ ₹ 5 ಸಾವಿರ ಆದಾಯ ತಲುಪುವ ಹಾಗೆ ಮಾಡಿರುವುದು ಕ್ರಾಂತಿ ಅಲ್ಲವೇ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಪ್ರಶ್ನಿಸಿದರು. ಶ್ರವಣಬೆಳಗೊಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಕೆ.ಎನ್. ರಾಜಣ್ಣ ಅವರ ಸೆಪ್ಟೆಂಬರ್ ಕ್ರಾಂತಿಯ ಕುರಿತು ಈ ರೀತಿ ಪ್ರತಿಕ್ರಿಯಿಸಿದರು. ‘ಸಚಿವ ರಾಜಣ್ಣ ಅವರನ್ನು ನೀವು ಏನು ಪ್ರಶ್ನೆ ಕೇಳಿದ್ದೀರಿ? ಅವರು ಏನು ಉತ್ತರ ಹೇಳಿದ್ದಾರೋ ನನಗೆ ಗೊತ್ತಿಲ್ಲ. ತತ್ವ ಸಿದ್ದಾಂತದ ಮೇಲೆ ಸರ್ಕಾರ ರಚನೆ ಆಗಿದೆ. ಪಕ್ಷ ಕಟ್ಟಿದ್ದೇವೆ. ಬದಲಾವಣೆ ಕ್ರಾಂತಿ ಹೀಗೆ ಯಾರು ಏನೇ ಮಾತನಾಡಿದರೂ ನಮ್ಮ ಸರ್ಕಾರ ಸದೃಢವಾಗಿರುತ್ತದೆ’ ಎಂದರು. ‘ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ದೆಹಲಿ ಭೇಟಿ ಸುರ್ಜೆವಾಲ ಶಾಸಕರ ಜೊತೆ ಮಾತುಕತೆ ನಡೆಸಿರುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಏನನ್ನೂ ಮಾತನಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾವು ಕಾಂಗ್ರೆಸ್‌ನ ಶಿಸ್ತಿನ ಕಾರ್ಯಕರ್ತರು. ಅವರ ಆದೇಶ ಪಾಲನೆ ಮಾಡುತ್ತೇವೆ’ ಎಂದರು. ‘ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ತಡೆಯುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.