ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೊ ಹಂಚಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ 18 ಕಡೆ ಎಸ್‌ಐಟಿ ತಂಡ ದಾಳಿ ನಡೆಸಿತು.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಆಪ್ತರ ಮನೆಗಳಲ್ಲಿ ದಾಳಿ ನಡೆದಿದ್ದು, ಒಟ್ಟು 7 ಪೆನ್ ಡ್ರೈವ್‌ಗಳು, 6 ಹಾರ್ಡ್ ಡಿಸ್ಕ್, 4 ಲ್ಯಾಪ್‌ಟಾಪ್, 3 ಡೆಸ್ಕ್ ಟಾಪ್‌ಗಳನ್ನು ವಶಕ್ಕೆ ಪಡೆದಿದೆ.
ಪ್ರೀತಂ ಗೌಡ ಆಪ್ತರು ಮತ್ತು ಪ್ರಕರಣದ ಸಂಬಂಧ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಆರೋಪಿಗಳಿಗೆ ಸೇರಿದ ಜಾಗಗಳು ಸೇರಿದಂತೆ 18 ಕಡೆಗಳಲ್ಲಿ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
‘ವಶಕ್ಕೆ ಪಡೆದ ಪೆನ್ಡ್ರೈವ್ಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್ಐಟಿ ಕಳುಹಿಸಲಿದೆ. ಪೆನ್ಡ್ರೈವ್ಗಳು ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದ್ದೇ ಹೌದೋ, ಅಲ್ಲವೋ ಎಂಬುದು ವರದಿ ಬಂದ ಬಳಿಕವಷ್ಟೇ ತಿಳಿದುಬರಲಿದೆ’ ಎಂದು ಮೂಲಗಳು ತಿಳಿಸಿವೆ.
ದಾಳಿ ನಡೆಸಿದ ಮನೆ, ಕಚೇರಿಗಳಲ್ಲಿ ಅಳವಡಿಸಲಾಗಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ವಿಡಿಯೊಗಳನ್ನು ಪೆನ್ ಡ್ರೈವ್, ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ಗೆ ಕಾಪಿ ಮಾಡಿ, ನಂತರ ಬೇರೆಯವರಿಗೆ ಹಂಚಿರುವ ಆರೋಪವಿದೆ. ಪೆನ್‌ಡ್ರೈವ್ ಹಂಚಿಕೆಯ ಆರೋಪ ಎದುರಿಸುತ್ತಿರುವವರ ಮನೆ, ಕಚೇರಿಗೆ ಬಂದು ಹೋಗಿರುವವರ ಬಗ್ಗೆಯೂ ಎಸ್‌ಐಟಿ ಮಾಹಿತಿ ಕಲೆ ಹಾಕುತ್ತಿದೆ.
ಕಸ್ಟಡಿ ವಿಸ್ತರಣೆ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲ ದೇವರಾಜಗೌಡರ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಒಂದು ದಿನಕ್ಕೆ ವಿಸ್ತರಿಸಲಾಗಿದೆ.
ಹೊಳೆನರಸೀಪುರ ನಗರ ಠಾಣೆ ಪೊಲೀಸರು ಮೇ 14ರಂದು ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಅವಧಿ ಮುಗಿದಿದ್ದರಿಂದ ಕೋರ್ಟ್‌ಗೆ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಮತ್ತೊಂದು ದಿನ ನೀಡಬೇಕು ಎಂಬ ಪೊಲೀಸರ ಮನವಿಯನ್ನು ಜೆಎಂಎಫ್ ನ್ಯಾಯಾಲಯ ಪುರಸ್ಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.