ADVERTISEMENT

ನುಗ್ಗೇಹಳ್ಳಿ | ಭೈರಪ್ಪ ಪ್ರತಿಮೆ, ಸಮುದಾಯ ಭವನ ನಿರ್ಮಿಸಿ: ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:15 IST
Last Updated 29 ಸೆಪ್ಟೆಂಬರ್ 2025, 4:15 IST
ಎಸ್. ಎಲ್. ಭೈರಪ್ಪ ಅವರ ಅವರ ಕಿರಿಯ ಪುತ್ರ ಉದಯಶಂಕರ್ ಅವರು ಮೈಸೂರಿನಿಂದ ಅವರ ತಂದಿದ್ದ ಚಿತಾಭಸ್ಮವನ್ನು ಗ್ರಾಮಸ್ಥರು ಹಾಗೂ ಶಾಸಕರು ಬರಮಾಡಿಕೊಂಡರು.
ಎಸ್. ಎಲ್. ಭೈರಪ್ಪ ಅವರ ಅವರ ಕಿರಿಯ ಪುತ್ರ ಉದಯಶಂಕರ್ ಅವರು ಮೈಸೂರಿನಿಂದ ಅವರ ತಂದಿದ್ದ ಚಿತಾಭಸ್ಮವನ್ನು ಗ್ರಾಮಸ್ಥರು ಹಾಗೂ ಶಾಸಕರು ಬರಮಾಡಿಕೊಂಡರು.   

ನುಗ್ಗೇಹಳ್ಳಿ: ಸಾಹಿತಿ ಎಸ್.ಎಲ್. ಭೈರಪ್ಪ ಅವರ ಚಿತಾಭಸ್ಮವನ್ನು ಅವರ ಆಸೆಯಂತೆ ಹೋಬಳಿಯ ಹುಟ್ಟೂರು ಸಂತೇಶಿವರ ಕೆರೆಯಲ್ಲಿ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯ ಶಂಕರ್ ವಿಸರ್ಜಿಸಿದರು.

ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ ನಂತರ ಶನಿವಾರ ಕಾವೇರಿ ನದಿಯಲ್ಲಿ ಅವರ ಮಕ್ಕಳು ಅವರ ಸಂಪ್ರದಾಯದಂತೆ ಚಿತಾಭಸ್ಮ ವಿಸರ್ಜನೆ ಮಾಡಿದ್ದರು. ಆದರೆ ಹುಟ್ಟೂರಿನ ಬಗ್ಗೆ ಎಸ್. ಎಲ್. ಭೈರಪ್ಪನವರಿಗೆ ಇದ್ದ ಅಭಿಮಾನದಿಂದ ಅವರ ಪುತ್ರರು ಭಾನುವಾರ ಅವರ ತಂದೆಯ ಕನಸಿನ ಯೋಜನೆಯಿಂದ ಗ್ರಾಮದ ಕೆರೆಯಲ್ಲಿ ನೀರು ಬಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಚಿತಾಭಸ್ಮ ವಿಸರ್ಜಿಸಿದರು.

ಬ್ರಾಹ್ಮಣ ಸಂಪ್ರದಾಯದಂತೆ ಪೂಜೆ:

ಬ್ರಾಹ್ಮಣ ಸಂಪ್ರದಾಯದಂತೆ ಭೈರಪ್ಪನವರ ಚಿತಾಭಸ್ಮಕ್ಕೆ ಪ್ರಭಾಕರ್ ಜೋಯಿಸ್, ಅನಂತರಾಮ ಜೋಯಿಸ್, ವೇಣುಗೋಪಾಲ್, ಎಸ್.ಡಿ. ನಾಗರಾಜ್ ರಾವ್ ಅವರುಗಳು ಪೂಜೆಯಲ್ಲಿ ಸ್ವಸ್ತಿಕ್ ಮಂತ್ರ ವೇದ ಘೋಷ, ಶಾಂತಿ ಮಂತ್ರ ಸೇರಿದಂತೆ ವಿವಿಧ ಮಂತ್ರಗಳನ್ನು ಪಠಣ ಮಾಡಿ ಪೂಜೆ ನೆರವೇರಿಸಿದರು.

ADVERTISEMENT

ಎಸ್.ಎಲ್. ಭೈರಪ್ಪ ಅವರ ಕಿರಿಯ ಪುತ್ರ ಉದಯಶಂಕರ್ ಅವರು ಮೈಸೂರಿನಿಂದ ಅವರ ತಂದೆಯವರ ಚಿತಾಭಸ್ಮವನ್ನು ತಂದಿದ್ದು, ಅವರನ್ನು  ಗ್ರಾಮಸ್ಥರು ಹಾಗೂ ಶಾಸಕರು ಬರಮಾಡಿಕೊಂಡರು.

ಗ್ರಾಮದ ಕೆರೆಯ ಪಕ್ಕ ನಡೆದ ಪೂಜಾ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಎಸ್.ಎಲ್. ಭೈರಪ್ಪ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಿದರು.

ಜ್ಞಾನಪೀಠ ಪ್ರಶಸ್ತಿ ನೀಡಲು ಆಗ್ರಹ:

ಶಾಸಕರು ‘ಸುಮಾರು 41 ಭಾಷೆಗಳಿಗೆ ಎಸ್.ಎಲ್. ಭೈರಪ್ಪ ಅವರ ಕೃತಿಗಳು ಅನುವಾದಗೊಂಡಿದ್ದು, ಅವರ ಸಾಹಿತ್ಯ ಲೋಕದ ಸಾಧನೆ ಪರಿಗಣಿಸಿ ಅವರಿಗೆ ‘ಜ್ಞಾನಪೀಠ ಪ್ರಶಸ್ತಿ' ನೀಡಬೇಕು ಜೊತೆಗೆ ಸರ್ಕಾರ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಭರವಸೆ ನೀಡಿದ ಅದೇ ರೀತಿ ಅವರ ಹುಟ್ಟೂರಿನಲ್ಲಿಯೂ ಪ್ರತಿಮೆ ನಿರ್ಮಾಣ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಅವರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೀಘ್ರ ಮನವಿ ಸಲ್ಲಿಸಲಾಗುತ್ತದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.

‘ಎಸ್.ಎಲ್. ಭೈರಪ್ಪ ಅವರ ಪರಿಶ್ರಮದಿಂದ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಯೋಜನೆಗೆ ₹25 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಭೈರಪ್ಪನವರ ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್‌ ಅವರು ಯೋಜನೆ ಪೂರ್ಣಗೊಳ್ಳಲು ಹೆಚ್ಚಿನ ಸಹಕಾರ ನೀಡಿದರು. ಅವರ ನೆನಪಿಗಾಗಿ ಪ್ರತಿ ವರ್ಷವೂ ಅವರ ಹುಟ್ಟೂರಿನಲ್ಲಿ 2 ದಿವಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ಎಸ್.ಎಲ್. ಭೈರಪ್ಪ ಅವರು ದೇಶ, ರಾಜ್ಯವಲ್ಲದೆ ವಿಶ್ವಮಟ್ಟದಲ್ಲಿಯೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅವರ ಕನಸಿನಂತೆ ಗ್ರಾಮದ ಏತ ನೀರಾವರಿ ಯೋಜನೆ ಪೂರ್ಣಗೊಂಡ ಸಂದರ್ಭದಲ್ಲಿ ‘ಭಗೀರಥ ಸ್ವರೂಪಿ ನಮ್ಮ ಭೈರಪ್ಪ ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರಿಗೆ ಬಿರುದು ನೀಡಿ ಸನ್ಮಾನಿಸಲಾಯಿತು. ಸರಸ್ವತಿ ಸನ್ಮಾನ್ ಬಿರುದು ನೀಡಿದ ಸಂದರ್ಭದಲ್ಲೂ ಹಾಗೂ ಈ ಕಾರ್ಯಕ್ರಮದಲ್ಲೂ ಅದ್ದೂರಿಯಾಗಿ ಸನ್ಮಾನಿಸಲಾಗಿತ್ತು’ ಎಂದು ಸ್ಮರಿಸಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಮಾತನಾಡಿ, ಎಸ್.ಎಲ್. ಭೈರಪ್ಪ ಅವರ ಕೃತಿಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿವೆ. ಅವರ ಈ ಸಾಧನೆಗೆ ಅವರ ಪರಿಶ್ರಮವೇ ಕಾರಣ ಅವರು ಚಿಕ್ಕ ವಯಸ್ಸಿನಲ್ಲಿ ಕಡು ಬಡತನದಲ್ಲಿ ಬೆಳೆದಿದ್ದರೂ ಪ್ಲೇಗ್‌ನಿಂದ ಅವರ ತಂಗಿ ಹಾಗೂ ತಮ್ಮ ಮೃತಪಟ್ಟ ಸಂದರ್ಭ ಅವರನ್ನು ಅವರ ತಾಯಿ ಗೌರಮ್ಮ ಜೋಪಾನವಾಗಿ ನೋಡಿಕೊಂಡಿದ್ದರು. ಅವರ ಸಾಧನೆಗೆ ಹುಟ್ಟೂರಿನ ಹೆಸರು ತಳಕು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ’ ಎಂದು ಆಗ್ರಹಿಸಿದರು.

ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಗೌರವಾಧ್ಯಕ್ಷ ಡಾ. ಜಿ.ಎಲ್. ಶೇಖರ್ ಮಾತನಾಡಿ, ‘ಅವರ ನಿಧನದ ನಂತರ ಅವರ ಕುಟುಂಬದಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅವರ ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್ ಅವರು ತಂದೆಯನ್ನು  ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಕಳೆದ 6 ತಿಂಗಳಿಂದ ಅವರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗಿತ್ತು. ಕೆಲವೊಂದು ಬಾರಿ ನಮ್ಮನ್ನೇ ನೀವು ಯಾರು ಎಂದು ಕೇಳುತ್ತಿದ್ದರು. ಆದರೆ ಅವರು ನಿಧನ ಹೊಂದಿದ ನಂತರ ಕೆಲವರು ಎಸ್.ಎಲ್. ಭೈರಪ್ಪನವರು ವಿಲ್ ಮಾಡಿದ್ದರು ಎಂದು ಗೊಂದಲ ಉಂಟು ಮಾಡುತ್ತಿದ್ದಾರೆ. ಅವರ ಪುತ್ರರಿಗೆ ಅವರ ತಂದೆಯವರ ಹಣ ಮುಖ್ಯವಲ್ಲ, ಹೆಸರು ಮುಖ್ಯ ಎಂದು ಕೆಲಸ ನಿರ್ವಹಿಸುತ್ತಿದ್ದಾರೆ. ಅಂತವರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ. ಅವರ ಆಸೆಯಂತೆ ಈಗಾಗಲೇ ಗ್ರಾಮದ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ನೀರು ಬಂದಿದೆ. ಅದರಂತೆ ಅವರ ಅಧ್ಯಯನ ಕೇಂದ್ರ ಅಪೂರ್ಣಗೊಂಡಿದೆ ಕಾಮಗಾರಿ ಪೂರ್ಣಗೊಳ್ಳಲು ಇನ್ನು ₹5 ಕೋಟಿಯಲ್ಲಿ ಕೇವಲ 1 ಕೋಟಿ ಮಾತ್ರ ಬಿಡುಗಡೆ ಮಾಡಿದ್ದು, ಉಳಿದ ಹಣವನ್ನು ಸರ್ಕಾರ ಬಿಡುಗಡೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಬೇಕಾಗಿದೆ’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರಾಜಣ್ಣ (ಗಂಗೇಗೌಡ) ಮಾತನಾಡಿ, ‘ಎಸ್.ಎಲ್. ಭೈರಪ್ಪನವರು ಗ್ರಾಮದ ಪ್ರೀತಿಯ ಮಗನಾಗಿದ್ದರೂ ಅವರು ತಮ್ಮ ಇಳಿವಹಿಸಿನಲ್ಲೂ ಸ್ವಂತ ಅವರೇ ಕಾರು ಚಾಲನೆ ಮಾಡಿಕೊಂಡು ಬಂದು ಗ್ರಾಮಕ್ಕೆ ಬರುತ್ತಿದ್ದರು. ಗ್ರಾಮದ ಅಭಿವೃದ್ಧಿ ಕೆಲಸಗಳ ಬಗ್ಗೆ ಸದಾ ಚಿಂತಿಸುತ್ತಿದ್ದರು. ಅವರ ಪರಿಶ್ರಮದಿಂದಲೇ ನೀರಾವರಿ ಯೋಜನೆ ಪೂರ್ಣಗೊಂಡಿದೆ. ಯೋಜನೆಗೆ ಅವರ ಹೆಸರು ನಾಮಕರಣ ಮಾಡಬೇಕು’ ಎಂದು ಮನವಿ ಮಾಡಿದರು.

ನುಗ್ಗೇಹಳ್ಳಿ ಹೋಬಳಿಯ ಸಂತೇಶಿವರ ಗ್ರಾಮದಲ್ಲಿ ಕೆರೆಯ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎಲ್. ಭೈರಪ್ಪ ಅವರ ಚಿತಾಭಸ್ಮಕ್ಕೆ ಹಾಗೂ ಅವರ ಭಾವಚಿತ್ರಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಪೂಜೆ ಸಲ್ಲಿಸಿದರು.

ತಾಲೂಕು ಟಿಎಪಿಎಂಎಸ್ ನಿರ್ದೇಶಕ ಎಸ್ ಚಿರಂಜೀವಿ ಮಾತನಾಡಿ, ‘ಎಸ್.ಎಲ್. ಭೈರಪ್ಪನವರ ಆಸೆಯಂತೆ ಗ್ರಾಮದ ಕೆರೆಯ ಏರಿ ಹಿಂಭಾಗ ಇರುವ ಗಂಗಾಧರೇಶ್ವರ ದೇವಾಲಯ ಜೀರ್ಣೋದ್ಧಾರ ಕೈಗೊಳ್ಳಬೇಕು, ಅವರು ಬದುಕಿದ್ದಾಗಲೇ ದೇವಾಲಯ ನಿರ್ಮಾಣಕ್ಕೆ ₹1 ಲಕ್ಷ ನೀಡಿದ್ದರೂ ಅವರ ಆಸೆಯಂತೆ ದೇವಾಲಯ ನಿರ್ಮಾಣಗೊಂಡರೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ’ ಎಂದರು.

ಬೆಂಗಳೂರು ಗಾಂಧಿ ಪ್ರತಿಷ್ಠಾನದ ಶಿವರಾಜಣ್ಣ, ವೀರಶೈವ ಸಮಾಜದ ಹಿರಿಯರಾದ ದುಗ್ಗೇನಹಳ್ಳಿ ವೀರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಧು ಪಟೇಲ್, ಗಂಜಿಗೆರೆ ಕೃಷ್ಣ, ಉದ್ಯಮಿ ಅಣತಿ ಯೋಗೇಶ್, ಮುಖಂಡರಾದ ಜಯ ಲಿಂಗೇಗೌಡ, ಕುಳ್ಳೇಗೌಡ, ರಾಜಣ್ಣ, ಮಂಜುನಾಥ್, ಪುಟ್ಟಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್, ಸಾವಯವ ಕೃಷಿಕ ಬಸವರಾಜು, ಗುಡಿ ಗೌಡ್ರು ಮನೆ ಗಂಗೆಗೌಡ, ರವೀಶ್, ಜವಳಿ ರಾಜಣ್ಣ, ಅಯ್ನರ್ ಅನಂತ್, ನಾಗಣ್ಣ, ವೀರೇಶ್ ಬೊಮ್ಮೇಗೌಡ, ಧನಂಜಯ್ ಲಲಿತಮ್ಮ ಸೇರಿದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.

ಸಂತೇಶಿವರ ಗ್ರಾಮದ ಗಂಗಾಧರೇಶ್ವರ ದೇವಾಲಯದ ಬಳಿ ಕೆರೆ ಸೋಪಾನದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರವರು ತಂದೆಯ ಚಿತಾಭಸ್ಮಕ್ಕೆ ಪೂಜೆ ಸಲ್ಲಿಸಿದರು
ಸಂತೇ ಶಿವರ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಾಲಯದ ಬಳಿ ಕೆರೆ ಸೋಪಾನದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರವರು ತೆಪ್ಪದಲಿ ತೆರಳಿ ತಂದೆಯ ಚಿತಾಭಸ್ಮ ವನ್ನು ಕೆರೆಯ ನೀರಿನಲ್ಲಿ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.