ADVERTISEMENT

ಡಾ.ಸೂರಜ್ ರೇವಣ್ಣ ಜೆಡಿಎಸ್ ಅಭ್ಯರ್ಥಿ: ಕುಟುಂಬ ರಾಜಕಾರಣದ ಸುತ್ತ ‘ದಳ’ ಗಿರಕಿ

ಕೆ.ಎಸ್.ಸುನಿಲ್
Published 17 ನವೆಂಬರ್ 2021, 19:08 IST
Last Updated 17 ನವೆಂಬರ್ 2021, 19:08 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲೂ ಜೆಡಿಎಸ್‌ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿದೆ.

ರಾಜ್ಯಸಭೆ ಸದಸ್ಯ ಎಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ, ಶಾಸಕ ಎಚ್.ಡಿ.ರೇವಣ್ಣ ಪುತ್ರ ಡಾ.ಸೂರಜ್‌ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ.

ದೇವೇಗೌಡರ ಮಕ್ಕಳಾದ ಎಚ್.ಡಿ.ರೇವಣ್ಣ, ಎಚ್‌.ಡಿ.ಕುಮಾರಸ್ವಾಮಿ ಶಾಸಕರು, ಮೊಮ್ಮಗ ಪ್ರಜ್ವಲ್‌ ರೇವಣ್ಣ ಸಂಸದ, ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ನಿಖಿಲ್‌ ಕುಮಾರಸ್ವಾಮಿ ಮಂಡ್ಯದಲ್ಲಿ ಚುನಾವಣೆಗೆ ನಿಂತು ಸೋಲು ಕಂಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತವರು ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟ ಎಚ್.ಡಿ.ದೇವೇಗೌಡರು ತುಮಕೂರಿನಲ್ಲಿ ನಿಂತು ಸೋಲು ಕಂಡ ಬಳಿಕ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ADVERTISEMENT

ವಿಧಾನ ಪರಿಷತ್‌ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದವರೇ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನದ ಹೊಗೆ ಶುರುವಾಗಿತ್ತು. ಆದರೆ, ಗೌಡರು ಹಿರಿಯ ನಾಯಕರಾಗಿರುವುದರಿಂದ ಯಾರೊಬ್ಬರೂ ಬಹಿರಂಗವಾಗಿ ಸೊಲ್ಲೆತ್ತುವ ಧೈರ್ಯ ಮಾಡುತ್ತಿಲ್ಲ ಎಂದು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ.

ಈ ಚುನಾವಣೆಯಲ್ಲೂ ರಾಜಕೀಯವಾಗಿ ಪ್ರಭಾವಿಯಾಗಿರುವ ಕುಟುಂಬದವರೇ ಸ್ಪರ್ಧಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ಶುರುವಾಗಿದೆ. ಪಕ್ಷದ ಸಂಘಟನೆಗೆ ಶ್ರಮಿಸಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕಿತ್ತು ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ.

‘ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಇಂಥವರೇ ರಾಜಕೀಯಕ್ಕೆ ಬರಬೇಕು ಎಂದು ಗೆರೆಎಳೆಯಲಾಗಿದೆಯೇ?’ ಎನ್ನುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಕುಟುಂಬ ರಾಜಕಾರಣವನ್ನುಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಭವಾನಿ ರೇವಣ್ಣ ಹೆಸರು ಸ್ಪರ್ಧಾಕಾಂಕ್ಷಿಗಳ ಪಟ್ಟಿಯಲ್ಲಿಮುಂಚೂಣಿಯಲ್ಲಿತ್ತಾದರೂ ಕುಟುಂಬ ಸದಸ್ಯರು ಸೂರಜ್‌ಗೆ ನೆಲೆ ಕಲ್ಪಿಸುವ ಉದ್ದೇಶದಿಂದ ಸಾಕಷ್ಟುಚರ್ಚಿಸಿ, ಪರಿಷತ್‌ ಚುನಾವಣೆ ಮೂಲಕ ಅವರಿಗೆ ಅಖಾಡ ಸಜ್ಜುಗೊಳಿಸಲು ತೀರ್ಮಾನಿಸಿದ್ದಾರೆ.

ಕಳೆದ ಬಾರಿಯೇ ಭವಾನಿ ಅವರು ಸ್ಪರ್ಧೆಗಿಳಿಯಬೇಕು ಎಂಬ ಒತ್ತಡವಿತ್ತು. ಆದರೆ, ಪಟೇಲ್‌ ಶಿವರಾಂ ಅವರ ಪರ ದೇವೇಗೌಡರು ಒಲವು ವ್ಯಕ್ತಪಡಿಸಿದ್ದರಿಂದ ಅವಕಾಶ ಸಿಗಲಿಲ್ಲ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಸೂರಜ್‌ ಅಭಿಮಾನಿಗಳ ಸಂಘವೂ ಇದೆ. ಸೂರಜ್‌ ಅವರಿಗೂ ರಾಜಕೀಯವಾಗಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಅಭಿಲಾಷೆ ಇದೆ. ಎಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿರುವ ಅವರನ್ನು ಪರಿಷತ್‌ಗೆ ಕಳುಹಿಸಿ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು ಎಂಬುದು ಮುಖಂಡರು ಮತ್ತು ಕಾರ್ಯಕರ್ತರ ಒತ್ತಾಯ.

ಜಿಲ್ಲೆಯ ಮಟ್ಟಿಗೆ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನೂ ರೇವಣ್ಣ ಅವರೇ ಕೈಗೊಳ್ಳುತ್ತಾರೆ. ಭವಾನಿ, ಸೂರಜ್‌ ಹೆಸರನ್ನು ಮುಂಚೂಣಿಗೆ ತಂದು ವಿಧಾಸಭಾ ಕ್ಷೇತ್ರವಾರು ಸಭೆಆಯೋಜಿಸುತ್ತಿರುವುದರಿಂದ ಅಲ್ಲಿಯೂ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ. ಕುಟುಂಬ ರಾಜಕಾರಣಆರೋಪದ ಮಧ್ಯೆ ಅಭ್ಯರ್ಥಿ ಸ್ಪರ್ಧೆಯನ್ನು ಆ ಮೂಲಕ ಸಮರ್ಥಿಸಿಕೊಳ್ಳಬಹುದು ಎನ್ನುವುದು ಪಕ್ಷದೊಳಗಿನಲೆಕ್ಕಾಚಾರ ಎನ್ನಲಾಗಿದೆ.

ಡಾ.ಸೂರಜ್ ಜೆಡಿಎಸ್ ಅಭ್ಯರ್ಥಿ

ವಿಧಾನ ಪರಿಷತ್ ಚುನಾವಣೆಗೆ ನ. 19ರಂದು ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ದೇವೇಗೌಡ, ಎಚ್‌.ಡಿ. ರೇವಣ್ಣ, ಕಿರಿಯ ಸಹೋದರ ಪ್ರಜ್ವಲ್‌ ಸ್ಪರ್ಧಿಸಿದ ಚುನಾವಣೆಗಳಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ಸೂರಜ್‌ ತೊಡಗಿದ್ದಾರೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರೇವಣ್ಣ, ವಿಧಾನಸಭಾ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹ ನೆಪದಲ್ಲಿ ಪ್ರಚಾರವನ್ನೂ ಮಾಡುತ್ತಿದ್ದಾರೆ.

ಭವಾನಿ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.