ADVERTISEMENT

ಸಹ್ಯಾದ್ರಿ ರಸ್ತೆಯಲ್ಲಿ ಸುಸಜ್ಜಿತ ಫುಡ್‌ಕೋರ್ಟ್‌

ರಸ್ತೆ ಬದಿ ವ್ಯಾಪಾರಿಗಳ ಸಂಕಷ್ಟಕ್ಕೆ ಶಾಸಕ ಪ್ರೀತಂ ಸ್ಪಂದನೆ

ಕೆ.ಎಸ್.ಸುನಿಲ್
Published 31 ಜುಲೈ 2021, 13:16 IST
Last Updated 31 ಜುಲೈ 2021, 13:16 IST
ಹಾಸನ ಸಹ್ಯಾದ್ರಿ ರಸ್ತೆಯಲ್ಲಿ ನಿರ್ಮಿಸಿರುವ ಫುಡ್‌ಕೋರ್ಟ್‌ ಶೆಲ್ಟರ್‌ನಲ್ಲಿ ಗ್ರಾಹಕರು ಆಹಾರ ಸೇವಿಸುತ್ತಿರುವ ದೃಶ್ಯ
ಹಾಸನ ಸಹ್ಯಾದ್ರಿ ರಸ್ತೆಯಲ್ಲಿ ನಿರ್ಮಿಸಿರುವ ಫುಡ್‌ಕೋರ್ಟ್‌ ಶೆಲ್ಟರ್‌ನಲ್ಲಿ ಗ್ರಾಹಕರು ಆಹಾರ ಸೇವಿಸುತ್ತಿರುವ ದೃಶ್ಯ   

ನಮ್ಮ ಊರು ನಮ್ಮ ಜಿಲ್ಲೆ

ಹಾಸನ: ರಸ್ತೆ ಬದಿ ತಿನಿಸುಗಳ ಮಾರಾಟಕ್ಕಾಗಿ ನಗರದ ಸಹ್ಯಾದ್ರಿ ರಸ್ತೆಯಲ್ಲಿ ₹1.5 ಕೋಟಿ ವೆಚ್ಚದಲ್ಲಿ ಫುಡ್‌ಕೋರ್ಟ್‌ ನಿರ್ಮಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ.

ಸಹ್ಯಾದ್ರಿ ವೃತ್ತದಿಂದ ಮಹಾವೀರ ವೃತ್ತದವರೆಗೂ ಸುಮಾರು 500 ಮೀಟರ್‌ ಉದ್ದ, ಏಳು ಅಡಿ ಅಗಲದ
ಗೆಲಾನಿಯಂ ಶೀಟ್‌ ಛಾವಣಿಯ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ನೆಲಕ್ಕೆ ಟೈಲ್ಸ್‌ ಅಳವಡಿಸಿದ್ದು, ಸ್ಟೀಲ್‌
ಬ್ಯಾರಿಕೇಡ್‌ ಅಳವಡಿಸಲಾಗಿದೆ.

ADVERTISEMENT

ಶಾಸಕ ಪ್ರೀತಂ ಗೌಡ ಅವರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಮಾತ್ರವಲ್ಲದೇ ವಿವಿಧ ಮೂಲಗಳಿಂದಲೂ
ಫುಡ್‌ ಕೋರ್ಟ್‌ ನಿರ್ಮಾಣಕ್ಕೆ ಅಗತ್ಯವಾದ ಹಣ ಹೊಂದಿಸಲಾಗಿದೆ.

ಹಲವು ವರ್ಷಗಳಿಂದ ಸಹ್ಯಾದ್ರಿ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದ 88 ಜನರಿಗೆ ಅದೇ ಸ್ಥಳದಲ್ಲಿ
ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ. ತಿನಿಸು ಮಾರಾಟಗಾರರಿಗೆ ಸ್ಟೀಲ್‌ ಪ್ಯಾನಲ್‌ ಸಿದ್ದ
ಪಡಿಸಿಕೊಡೊಲಾಗಿದೆ. ಹಿಂಬದಿ ಕಾಂಪೌಂಡ್‌ಗೆ ಗ್ರಾಹಕರು ಪ್ಲೇಟ್‌ಗಳನ್ನಿಟ್ಟುಕೊಂಡು ಆಹಾರ ಸೇವಿಸಲು
ಸ್ಟ್ಯಾಂಡ್‌ ನಿರ್ಮಿಸಲಾಗಿದೆ.

ಸಾಮಾನ್ಯವಾಗಿ ಸಂಜೆ 4 ರಿಂದ ರಾತ್ರಿ 10ರವರೆಗೂ ಹೆಚ್ಚಿನ ವ್ಯಾಪಾರ ನಡೆಯುವುದರಿಂದ ಉತ್ತಮ ವಿನ್ಯಾಸದ ವಿದ್ಯುತ್ ಕಂಬಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ.

ಬೀದಿ ಬದಿ ತಿನಿಸುಗಳ ಮಾರಾಟದ ಸ್ಥಳದಲ್ಲಿ ಅಶುಚಿತ್ವ ತಾಂಡವವಾಡುತ್ತಿತ್ತು. ಕುಡಿಯುಲು ಶುದ್ಧ ನೀರು
ಇರಲಿಲ್ಲ. ತ್ಯಾಜ್ಯ ವಿಲೇವಾರಿಗೂ ಗ್ರಾಹಕರು ಪರದಾಡಬೇಕಿತ್ತು. ಖಾದ್ಯ ಸೇವಿಸಲು ಬಳಸುತ್ತಿದ್ದ ಪ್ಲೇಟ್‌,
ಲೋಟ್‌ಗಳನ್ನು ರಸ್ತೆ ಮತ್ತು ಮಹಾರಾಜ ಉದ್ಯಾನಕ್ಕೆ ಬಿಸಾಡುತ್ತಿದ್ದರು. ಸೊಳ್ಳೆ, ನೊಣಗಳ ಕಾಟವೂ
ಹೆಚ್ಚಾಗಿತ್ತು.

ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಚಿಂತನೆಗೆ ಒಳೆದದ್ದೇ ಫುಡ್‌ಕೋರ್ಟ್‌.ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರು ಮೊಬೈಲ್ ಕ್ಯಾಂಟೀನ್‌ ಮಾಲೀಕರೊಂದಿಗೆ ಸಭೆ ನಡೆಸಿದರು. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲೇ ಯೋಜನೆ ರೂಪಿಸಿ, ಶುಚಿ ಆಹಾರಕ್ಕೆ ಫುಡ್‌ ಕೋರ್ಟ್‌ ಅನುಷ್ಠಾನಗೊಳಿಸಿದ್ದಾರೆ.

ಪಾನಿಪೂರಿ, ಇಡ್ಲಿ, ದೋಸೆ ಕ್ಯಾಂಟೀನ್‌, ಕಬಾಬ್‌ ಸೆಂಟರ್‌ಗಳಿವೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ
ಸಹ್ಯಾದ್ರಿ ವೃತ್ತದ ಮೂಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಬೀದಿಬದಿ ತಿನಿಸುಗಳ
ವರ್ತಕರು ಅಲ್ಲಿಂದಲೇ ನೀರು ಸಂಗ್ರಹಿಸಿ ಬಳಕೆ ಮಾಡಬೇಕು.

‘ಬಿಸಿಲು, ಮಳೆ, ಚಳಿ ಲೆಕ್ಕಿಸದೆ ವ್ಯಾಪಾರ ಮಾಡುತ್ತಿದ್ದೇವು. ಸಮಸ್ಯೆಗೆ ಪರಿಹಾರವಾಗಿ ಫುಡ್‌ ಕೋರ್ಟ್‌
ನಿರ್ಮಿಸಲಾಗಿದೆ. ಅಂಗಡಿಗಳ ನಡುವೆ 8 ರಿಂದ 10 ಅಡಿ ಜಾಗವಿದೆ. ಮಧ್ಯದಲ್ಲಿ ಬಣ್ಣದ ಟೈಲ್ಸ್‌ ಗಳನ್ನು
ಹಾಕಿದ್ದು, ಅಕ್ಕಪಕ್ಕದವರು ಕಿತ್ತಾಡುವುದು ತಪ್ಪುತ್ತದೆ’ ಎಂದು ತಳ್ಳುವ ಗಾಡಿ ವರ್ತಕರ ಸಂಘದ ಅಧ್ಯಕ್ಷ
ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.