ADVERTISEMENT

ಶಾರ್ಟ್‌ ಸರ್ಕೀಟ್‌: 50 ಬೌನ್ಸ್‌ ಸ್ಕೂಟರ್‌ ಭಸ್ಮ

ಅಂದಾಜು ₹15 ಲಕ್ಷಕ್ಕೂ ಹೆಚ್ಚು ನಷ್ಟ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 13:40 IST
Last Updated 28 ಜನವರಿ 2021, 13:40 IST
ಹಾಸನ ನಗರದ ರಿಂಗ್ ರಸ್ತೆಯಲ್ಲಿ ಬೌನ್ಸ್ ಸ್ಕೂಟರ್‌ ನಿಲ್ಲಿಸಿದ್ದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.
ಹಾಸನ ನಗರದ ರಿಂಗ್ ರಸ್ತೆಯಲ್ಲಿ ಬೌನ್ಸ್ ಸ್ಕೂಟರ್‌ ನಿಲ್ಲಿಸಿದ್ದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.   

ಹಾಸನ: ನಗರದ ರಿಂಗ್‌ ರಸ್ತೆಯ ಕಟ್ಟಡದಲ್ಲಿ ಶಾರ್ಟ್ ಸರ್ಕಿಟ್‌ನಿಂದಾಗಿ ಗುರುವಾರ ಬೆಂಕಿ ಹೊತ್ತಿಕೊಂಡ ಪರಿಣಾಮ 50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್ಗಳು ಬೆಂಕಿಗಾಹುತಿಯಾಗಿವೆ.

ಡೈರಿ ವೃತ್ತದಿಂದ ಬೇಲೂರಿಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಯಲ್ಲಿರುವ ಕಟ್ಟಡದಲ್ಲಿ ಸ್ಕೂಟರ್‌ಗಳನ್ನು ನಿಲ್ಲಿಸಿದ್ದ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬೆಂಕಿ ತೀವ್ರವಾಗಿ ವ್ಯಾಪಿಸಿ, ವಾಹನಗಳು ಸುಟ್ಟು ಭಸ್ಮವಾದವು. ಜೊತೆಗೆ ಬ್ಯಾಟರಿಗಳು ಸಹ ಸ್ಫೋಟಗೊಂಡಿವೆ.

ಸ್ಥಳೀಯರು ಕಟ್ಟಡದ ಹೊರಗೆ ನಿಲ್ಲಿಸಿದ್ದ ಸ್ಕೂಟರ್‌ಗಳನ್ನು ಹಾನಿಯಾಗದಂತೆ ದೂರ ನಿಲ್ಲಿಸಿಮಾನವೀಯತೆ ಮೆರೆದರು.

ADVERTISEMENT

ಎರಡು ವಾಹನಗಳಲ್ಲಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಅರ್ಧ ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿಬೆಂಕಿ‌ ನಂದಿಸಿದರು. ಇದೇ ಕಟ್ಟಡದಲ್ಲಿನ ಮೂರು ಮಳಿಗೆಗಳಲ್ಲಿದ್ದ ವಸ್ತುಗಳನ್ನು ಬೇರೆಡೆಗೆ ಸಾಗಿಸಲಾಯಿತು.ಬೆಂಕಿ ರಭಸಕ್ಕೆ ಕಟ್ಟಡ ಬಿರುಕು ಬಿಟ್ಟಿದ್ದು, ಕುಸಿದು ಬೀಳುವ ಆತಂಕ ಎದುರಾಗಿದೆ.

‘ಬೌನ್ಸ್ ಸ್ಕೂಟರ್ ಗಳನ್ನು ನಿಲ್ಲಿಸಿದ್ದ ಕೆಳಮಹಡಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದ. ಈ ವೇಳೆ ಶಾರ್ಟ್ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಆತ ಹೊರಗೆ ಓಡಿ ಬಂದಿದ್ದಾನೆ. ನಂತರ ಎಲ್ಲಾ ಸ್ಕೂಟರ್‌ಗಳಿಗೂ ಬೆಂಕಿ ವ್ಯಾಪಿಸಿದ್ದು, ಸುಟ್ಟು ಹೋಗಿವೆ. ಅಂದಾಜು ₹15 ಲಕ್ಷಕ್ಕೂ ಹೆಚ್ಚು ನಷ್ವವಾಗಿದೆ’ಎಂದು ಮಾಲೀಕ ಜಗದೀಶ್ ಹೇಳಿದರು.

ಪೆನ್ಷನ್‌ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.